ಸ್ಟೇಟಸ್ ಕತೆಗಳು (ಭಾಗ ೬೬೪) - ಅಪರಾಧಿ ಅಲ್ಲ

ಸ್ಟೇಟಸ್ ಕತೆಗಳು (ಭಾಗ ೬೬೪) - ಅಪರಾಧಿ ಅಲ್ಲ

ಆ ಊರಿನಲ್ಲಿ ಒಂದು ಸಾವಾಯಿತು. ಸಾವು ಎಲ್ಲರಿಗೂ ಸಂಶಯವೇ ಹಾಗಾಗಿ ಅದು ಕೊಲೆ ಎಂದು ತೀರ್ಮಾನ ಆಯ್ತು. ಕೊಲೆ ಮಾಡಿದವರಾರು ಎಂದು ಎಲ್ಲರೂ ಹುಡುಕುವಾಗ ಯಾರು ಅನುಮಾನ ಪಡದೇ ಇರುವ ಅನಾಮಿಕನೊಬ್ಬನನ್ನ ಬಂಧಿಸಿಬಿಟ್ರು. ಯಾರ ಮಾತಿಗೂ ಬೆಲೆ ಇಲ್ಲ. ಹಲವು ವರ್ಷಗಳ ನಂತರ ಆತ ನಿರಪರಾಧಿ ಎಂಬ ತೀರ್ಪು ಹೊರಬಿತ್ತು. ಆದರೆ ಹಲವು ವರ್ಷಗಳ ಕಾಲ ಆ ಕತ್ತಲ ಕೋಣೆಯೊಳಗೆ ಆತನ ನರಕಯಾತನೆ ಆತನಿಗೆ ಮಾತ್ರ ಗೊತ್ತು. ಅವನ ಮನೆಯವರೊಂದೂ ಕಾರ್ಯಕ್ರಮಕ್ಕೆ ಹೋಗುವ ಹಾಗಿಲ್ಲ. ಅಂಗಡಿಗಳಿಂದ ಖರೀದಿಸುವ ಹಾಗಿಲ್ಲ, ಸಂಗಾತಿಗಳು ಜೊತೆಯಾಗುತ್ತಿಲ್ಲ. ಮನೆಗ್ಯಾರೂ ಬರುತ್ತಿಲ್ಲ. ಗೆಳೆಯರು ಮಾಯವಾಗಿದ್ದಾರೆ. ಬಂಧುಗಳು ಎನ್ನುವವರಿಲ್ಲ ಅಕ್ಕ ಪಕ್ಕದವರು ಮುಖ ನೋಡಿ ನಗುತ್ತಿಲ್ಲ. ಇವೆಲ್ಲವೂ ಸಾಧ್ಯವಾಗಿರುವುದು ಒಂದು ಅಪರಾಧವಿಲ್ಲದ ಕೆಲಸಕ್ಕಾಗಿ. ಮನುಷ್ಯ ಮಾಡದೇ ಇರುವ ತಪ್ಪಿಗೆ ಯಾರಾದರೂ ಶಿಕ್ಷೆ ಕೊಟ್ಟಾಗ ಅವನ ಬಳಿ ಹೋಗಿ ಕ್ಷಮೆ ಕೇಳಿ, ಜೀವನಪೂರ್ತಿ ಪ್ರಾಯಶ್ಚಿತ್ತದಲ್ಲೇ ಬದುಕುತ್ತೇವೆ. ಹಾಗಾದರೆ ತಪ್ಪು ಮಾಡದೇ ಇರುವಂತಹ ವ್ಯಕ್ತಿಗೆ ಶಿಕ್ಷೆಯನ್ನು ನೀಡಿದರು ಮೌನವಾಗಿ‌ ಕುಳಿತವರಿಗೆ ಏನು ಮಾಡೋದು. ಆತ ಇನ್ನೂ ಅನಾಮಿಕನಾಗಿ ಉಳಿದುಬಿಟ್ಟಿದ್ದಾನೆ. ಯಾವುದೋ ಮೂಲೆಯಲ್ಲಿ ಏನೋ ಒಂದು ಕೆಲಸವನ್ನು ಮಾಡಿಕೊಂಡು. ಬದುಕು ಮುಂದುವರಿಸಿದ್ದಾನೆ ಕೊಂದವರಿಗೂ ಸತ್ತವರಿಗೂ ಮಾತ್ರ ಗೊತ್ತಿರುವ ಸತ್ಯ ಇನ್ನು ಓಡಾಡುತ್ತಿದೆ ಅದನ್ನ ಹಿಡಿಯಲಾಗುತ್ತಿಲ್ಲ ಅನ್ನುವುದೇ ವಿಪರ್ಯಾಸ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ