ಸ್ಟೇಟಸ್ ಕತೆಗಳು (ಭಾಗ ೬೬೫) - ಆಸೆ

ಸ್ಟೇಟಸ್ ಕತೆಗಳು (ಭಾಗ ೬೬೫) - ಆಸೆ

ಅನಿರೀಕ್ಷಿತವಾಗಿ ಆಸ್ಪತ್ರೆಯಲ್ಲಿ ಮಲಗುವ ಸ್ಥಿತಿ ಅವನಿಗೆ ಒದಗಿತು. ಆ ಆಸ್ಪತ್ರೆಯ ಒಳಗೆ ಜನರ ಓಡಾಟ ಮದ್ದಿನ ವಾಸನೆ ನೋವುಗಳ ಬದಲಾವಣೆ ಎಲ್ಲವನ್ನು ಕಂಡಾಗ ಬದುಕಿನ ಬಗ್ಗೆ ಭಯ ಹೆಚ್ಚಾಯಿತು. ನಿನ್ನೆ ಪಕ್ಕದಲ್ಲಿ ಮಲಗಿದ್ದವರು ಮರಣ ಹೊಂದಿದರಂತೆ ಅನ್ನುವ ಸುದ್ದಿ ಎದೆಯಲ್ಲೇನೋ ಸಣ್ಣ ಕಂಪನವನ್ನು ಹುಟ್ಟಿಸಿತು.ಇಲ್ಲಿ ಮಲಗಿರುವ ಪ್ರತಿಯೊಬ್ಬರಿಗೂ ಭಯ ಇದ್ದೇ ಇರುತ್ತದೆ ಮುಂದೆ ಏನಾಗುತ್ತೆ ಎಲ್ಲಿಗೆ ಹೋಗಿ ತಲುಪುತ್ತೆ ಅನ್ನುವ ಆತಂಕದಲ್ಲಿ ದಿನವನ್ನು ದೂಡುತ್ತಾರೆ. ಒಳಗಿನ ಭಯ ಹೊರಗೂ ದಾಟುತ್ತದೆ ಒಳಗೆ ಉಂಟಾಗುವ ಎದೆಯೊಳಗಿನ ಯಾತನೆ ತರಂಗಗಳ ಮೂಲಕ ಹೊರಗೂ ಚಲಿಸಿ ದಾರಿಯಲ್ಲಿ ಹಾದು ಹೋಗುವ ಒಂದಷ್ಟು ಜನರಿಗೆ ಆಸ್ಪತ್ರೆಯನ್ನು ನೋಡಿದಾಗ ಸಣ್ಣ ಭಯ ಉಂಟಾಗಿಯೇ ಆಗುತ್ತದೆ. ಅವನಿಗೆ ಕನಸುಗಳಿದೆ ಬದುಕಿನ ಮೇಲೆ ಆಸೆಗಳು ಇದೆ. ನೋವುಗಳನ್ನು ಮರೆತು ನಗುವುದಕ್ಕೆ ಪ್ರಯತ್ನಿಸುತ್ತಿದ್ದಾನೆ ಯಾಕೆಂದರೆ ಇವನ ಪಕ್ಕದಲ್ಲಿ ನಿಂತಿರುವವರಿಗೆ ಬದುಕಿನ ಬಗ್ಗೆ ಒಂದಷ್ಟು ಚೈತನ್ಯವನ್ನಾದರೂ ನೀಡಬೇಕು ಅಂತ. ಅಲ್ಲಿ ಖರ್ಚಾಗಬಹುದಾದ ಹಣದ ಬಗ್ಗೆಯೂ ಯೋಚನೆ ಹೆಚ್ಚಾಗುತ್ತಿದೆ ಆರೋಗ್ಯಕ್ಕೆ ಕೆಡುವುದಕ್ಕೆ ಇದೂ ಒಂದು ಕಾರಣವಾಗುತ್ತದೆ. ಆತ ಪ್ರತಿದಿನವೂ ಕಿಟಕಿಯಿಂದ ಹೊರಗಡೆ ಆಗಸವನ್ನು ದಿಟ್ಟಿಸುತ್ತಿದ್ದಾನೆ. ನಾನು ಹಾರಬೇಕು ಸ್ವಚಂದವಾಗಿ ಹಕ್ಕಿಗಳ ತರಹ. ಸಮಸ್ಯೆಗಳೆಲ್ಲವೂ ಕರಗಿ ತಿಳಿಯಾದ ಆಗಸದಂತೆ ಬದುಕಾಗಬೇಕು. ಎದುರು ನೋಡುತ್ತಿದ್ದಾನೆ ದಿನಗಳಿಗೆ. ಎಲ್ಲರ ಬದುಕು ಹೀಗಾಗಬೇಕು ಅಂತ ಅಂದುಕೊಂಡ ಆದರೆ ಆಂಬುಲೆನ್ಸ್ ಗಳ ಶಬ್ದ ಹೆಚ್ಚಾಗುತ್ತಾನೆ ಇದೆ..

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ