ಸ್ಟೇಟಸ್ ಕತೆಗಳು (ಭಾಗ ೬೬೬) - ವ್ಯಕ್ತಿತ್ವ

ಸ್ಟೇಟಸ್ ಕತೆಗಳು (ಭಾಗ ೬೬೬) - ವ್ಯಕ್ತಿತ್ವ

ಸರ್, ನಂದು ಒಂದು ಪ್ರಶ್ನೆ. ಈ ಮನುಷ್ಯರಿಗೆ ಮತ್ತು ಗಿಡ ಮರಗಳಿಗೆ ಎರಡಕ್ಕೂ ಜೀವ ಇದೆ. ಗಿಡ ಮರಕ್ಕೆ ಓಡಾಡೋಕೆ ಆಗೋದಿಲ್ಲ. ನಿಂತಲ್ಲೇ ನಿಂತಿರುತ್ತವೆ. ಮನುಷ್ಯನ ತರ ಸಾಧನೆಗಳನ್ನ ಮಾಡ್ತಾ ಇಲ್ಲ. ಗಾಳಿ ಒಂದನ್ನ ನೀಡ್ತಾ ಇದ್ದಾವೆ ಮತ್ತೇನು ಅದರಿಂದ ಸಾಧ್ಯವಾಗ್ತಿಲ್ಲ. ಆದ್ರೂ ಆಗಾಗ ನಿಮ್ಮ ಮಾತಿನಲ್ಲಿ ಗಿಡಮರಗಳನ್ನು ನೋಡಿ ಕಲಿಬೇಕು ಅಂತ ಹೇಳ್ತಿರಲ್ಲ ಅದು ಯಾಕೆ ?

ಕಾರಣ ಕೇಳಿದ್ದಕ್ಕೆ ಉತ್ತರ ಹೇಳುತ್ತಾ ಇದ್ದೇನೆ. ಗಿಡಕ್ಕೆ ತನ್ನದೇ ಆದ ವೈಯಕ್ತಿಕವಾದ ಗುಣಗಳೇನು ಇದಿಯೋ ಅದನ್ನ ಯಾವತ್ತೂ ಮರೆಯುವುದಿಲ್ಲ. ಅದು ಎಷ್ಟೇ ಕೆಸರಿನಲ್ಲಿ ಬೀಳಲಿ, ಬೆಟ್ಟ ಗುಡ್ಡಗಳಲ್ಲಾಗಲಿ, ನದಿ ಪ್ರದೇಶಗಳಲ್ಲಾಗಲಿ, ಕ್ರಿಮಿ ಕೀಟಗಳು ತುಂಬಿರುವ ಜಾಗದಲ್ಲಾಗಲಿ, ಬೇರು ಬಿಟ್ಟು ನೆಲದಿಂದ ಚಿಗಿದು ಮೇಲೆ ಏಳುವಾಗ ತನ್ನ ಮೂಲ ಸತ್ವವನ್ನು ಹಾಗೆ ಉಳಿಸಿಕೊಂಡು ಬೆಳೆಯುತ್ತದೆ. ಅದಕ್ಕೆ ತನ್ನ ಸುತ್ತಮುತ್ತಲಿನ ಪರಿಸರದ ಜೊತೆಗೆ ಹೊಂದಿಕೊಂಡು ಬೇರೇನೋ ರೀತಿಯಲ್ಲಿ ಬದಲಾವಣೆ ಆಗುವುದಿಲ್ಲ. ಆದರೆ ಮನುಷ್ಯ ಹಾಗಲ್ವಲ್ಲ. ತನ್ನದೇ ಆದ ವ್ಯಕ್ತಿತ್ವ ತನ್ನದೇ ಆದ ರೀತಿ ನೀತಿಗಳನ್ನು ಅಳವಡಿಸಿಕೊಂಡಿರುತ್ತಾನೆ. ಅವನನ್ನ ಒಂದಷ್ಟು ಜನ ಇಷ್ಟ ಕೂಡ ಪಟ್ಟಿರ್ತಾರೆ. ಆದರೆ ದಿನ ಕಳೆದಂತೆ ಸಹವಾಸ ಅನ್ನೋದು ವ್ಯಕ್ತಿಯನ್ನ ಎತ್ತರಕ್ಕೂ ಏರಿಸಬಹುದು ಕೆಳಗೂ ಇಳಿಸಬಹುದು. ಜೊತೆಗೆ ಸೇರುವುದರಿಂದ ವ್ಯಕ್ತಿಯಲ್ಲಿ ಬೇರೆ ಬೇರೆ ರೀತಿಯ ಬದಲಾವಣೆಗಳಾಗುತ್ತವೆ ತನ್ನ ಮೂಲ ವ್ಯಕ್ತಿತ್ವವನ್ನ ಹಾಗೆ ಗಟ್ಟಿಯಾಗಿ ಉಳಿಸಿಕೊಳ್ಳುವುದರಲ್ಲಿ ಸೋತಿರುತ್ತಾನೆ. ಅದಕ್ಕೆ ನಾನು ಹೇಳಿದ್ದು ಗಿಡಗಳು ತಮ್ಮ ಶ್ರೇಷ್ಠತೆಯನ್ನು ಹಾಗೆ ಉಳಿಸಿಕೊಂಡಿದ್ದಾವೆ. ಅಂತ ನಿಮಗೆ ಅರ್ಥವಾಗದಿದ್ದರೆ ಒಂದಷ್ಟು ಸುತ್ತ ಮುತ್ತ ನೋಡಿ. ಏನೆಲ್ಲಾ ಬದಲಾವಣೆಗಳಾಗಿದೆಯೋ ನಿಮಗೆ ಅರ್ಥವಾಗುತ್ತದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ