ಸ್ಟೇಟಸ್ ಕತೆಗಳು (ಭಾಗ ೬೬) - ಪ್ರಾರ್ಥನೆ

ಸ್ಟೇಟಸ್ ಕತೆಗಳು (ಭಾಗ ೬೬) - ಪ್ರಾರ್ಥನೆ

ಡಣ್... ಅದರ ನಾದ ಕೆಲ ಕ್ಷಣದವರೆಗೂ ಸುತ್ತಲೂ ತುಂಬಿತ್ತು. ನಾನು ಕೈಮುಗಿದು ನಿಂತು ಮನಸ್ಸಲ್ಲಿ ಮಾತನಾಡುತ್ತಿದ್ದೆ. ಅಲ್ಲಿ ಬಂದಿರೋ ಹೆಚ್ಚಿನವರೆಲ್ಲ ಕೈಮುಗಿದು ಜೋರು ಸ್ವರ ಮಾಡಿ ಮಾತನಾಡುತ್ತಿದ್ದರು. ದುಃಖವನ್ನು ತೊಡುತ್ತಿದ್ದರು. 

ಪ್ರಾರ್ಥನೆಯನ್ನ ಮನಸ್ಸಲ್ಲಿ ಕೇಳಿ ತಿರುಗಿ ಹೋಗೋಕಾಗಲ್ವಾ? ಅಂದುಕೊಂಡೆ. ಪ್ರಶ್ನೆ ಇಲ್ಲದ ಉತ್ತರವನ್ನು ತುಂಬಾ ಹೊತ್ತು ನನ್ನಲ್ಲಿ ಇಟ್ಟುಕೊಳ್ಳಲಾರೆ. ಎದುರಿಗೆ ಬಂದ ಹಿರಿಯ ಕನ್ನಡ ಅಧ್ಯಾಪಕರ ಸದಾಶಿವ ಸರ್ ಬಳಿ ವಿಚಾರಿಸಿದೆ.

"ನೋಡು ! ಮನುಷ್ಯನಾದವ ಮನಸ್ಸಿನೊಳಗಿನ ದುಃಖ ಯಾತನೆ, ನೋವುಗಳನ್ನ ಹೊರಹಾಕಿ ಹಗುರಾಗಬೇಕು. ಇಲ್ಲವಾದರೆ ಯೋಚನೆಗಳೆಲ್ಲಾ ಒಳಗೊಳಗೆ ಕೊರೆದು ನಮ್ಮನ್ನು ಎಂಥಹ ಕೆಟ್ಟ ನಿರ್ಧಾರಕ್ಕೆ  ಪ್ರೇರೇಪಿಸಬಹುದು .

ಒಳಗಿನ ಯಾತನೆಯನ್ನು ಹೇಳಿಕೊಂಡರೆ ಮನಸ್ಸು ಹಗುರಾಗುತ್ತದೆ ಯಾರಲ್ಲಿ ಹೇಳಿಕೊಳ್ಳುವುದು ಅನ್ನೋದೇ ದೊಡ್ಡ ಪ್ರಶ್ನೆ. ಮನುಷ್ಯರನ್ನು ನಂಬಕ್ಕಾಗಲ್ಲ ಪರಿಸ್ಥಿತಿಗೆ ತಕ್ಕದಾಗಿ ಬದಲಾಗಿ ಬಿಡುತ್ತಾರೆ. ಹಾಗಾಗಿ ಪ್ರತಿಯೊಂದು ಮಾತನ್ನು ಪ್ರೀತಿಯಿಂದ ಕೇಳಿಸಿಕೊಳ್ಳುವನೆಂದರೆ ಭಗವಂತನೊಬ್ಬನೆ! ಸಮಸ್ಯೆಗೊಂದು ಪರಿಹಾರ ಸಿಗುತ್ತದೆ ಎನ್ನುವ ದೃಢ ನಿರ್ಧಾರ.

ಭಕ್ತಿ ಏಕಮುಖವಾದರೆ ಅದಕ್ಕೆ ಅರ್ಥವಿಲ್ಲ ಹಾಗಾಗಿ ಏನೇ ಹೇಳುವುದಿದ್ದರೆ ಜೋರಿನಿಂದಲೇ ಉಚ್ಛ ಸ್ವರದಿಂದಲೇ ಕೇಳುವ ಹಾಗೆ ಕೇಳಿದರೆ ಫಲ ದೊರೆದೀತು. ನಾನೂ ಆರಂಭಿಸಿದೆ ಜೋರು ಸ್ವರದ ಪ್ರಾರ್ಥನೆ.

-ಧೀರಜ್ ಬೆಳ್ಳಾರೆ 

ಚಿತ್ರ ಕೃಪೆ: ಇಂಟರ್ನೆಟ್ ತಾಣ