ಸ್ಟೇಟಸ್ ಕತೆಗಳು (ಭಾಗ ೬೭೧) - ಆ ದಿನ

ಸ್ಟೇಟಸ್ ಕತೆಗಳು (ಭಾಗ ೬೭೧) - ಆ ದಿನ

ಆತ ಆ ಒಂದು ದಿನಕ್ಕಾಗಿ ಕಾಯುತ್ತಿದ್ದ. ಯಾರಿಗೂ ಗೊತ್ತಿರಲಿಲ್ಲ. ಆತನ ಗುರಿ ಏಕೆ ಅದೇ ಆಗಿದೆ ಅಂತ. ಅದಕ್ಕೋಸ್ಕರ ಆತ ಪಡುತ್ತಿದ್ದ ಶ್ರಮ ಅಷ್ಟಿಷ್ಟಲ್ಲ. ಆತನಿಗೆ ಗೊತ್ತಿತ್ತು ಬರಿಯ ಪ್ರತಿಭೆಗೆ ವೇದಿಕೆ ಸಿಗುವುದಿಲ್ಲ, ಆ ಪ್ರತಿಭೆಯ ಜೊತೆಗೆ ಒಂದಷ್ಟು ಪ್ರಸಿದ್ಧಿಯು ಇದ್ದಾಗ ನಮ್ಮನ್ನ ಗುರುತಿಸುತ್ತಾರೆ. ಗುರುತಿಸಿ ನಮಗೊಂದು ವೇದಿಕೆಯನ್ನು ನೀಡುತ್ತಾರೆ. ಆ ವೇದಿಕೆಗಳು ದೊಡ್ಡದಾಗುತ್ತಾ ಹಲವು ಜನ ನೋಡುವ ದೊಡ್ದ ವೇದಿಕೆಯೊಂದು ನಮ್ಮನ್ನು ಕರೆಯುತ್ತದೆ. ಆ ವೇದಿಕೆಯ ಮೇಲೆ ಏರಬೇಕು. ತನ್ನನ್ನ ಸಣ್ಣಂದಿನಿಂದ ಮುದ್ದಿಸಿ ಲಾಲಿಸಿ ಮನುಷ್ಯತ್ವವನ್ನು ಕಲಿಸಿ ಮೌಲ್ಯಗಳನ್ನು ತನ್ನೊಳಗೆ ಇಳಿಸಿ ಬೆಳೆಸಿದ ತಾಯಿಗೆ ತೊಂದರೆಯಾಗಿತ್ತು. ನೋವಾಗಿತ್ತು. ಮೋಸವಾಗಿತ್ತು. ಆ ಮೋಸ ತನ್ನವರಿಂದ ತಾ ನಂಬಿದವರಿಂದ ಆಗಿರೋದು. ಈಗ ಅದನ್ನ ಎಷ್ಟೇ ಜನರ ಮುಂದೆ ಹೇಳಿದರೂ ಜನ ಒಪ್ಪಿಕೊಳ್ಳುವುದಿಲ್ಲ. ದೊಡ್ಡ ವೇದಿಕೆಯಲ್ಲಿ ದೊಡ್ದವರ ಮುಂದೆ ಮಾಟನಾಡಿದಾಗ ಮಾತ್ರ ಎಲ್ಲರೂ ಹೌದೆನ್ನುತ್ತಾರೆ. ಸತ್ಯ ಒಪ್ಪಿಕೊಳ್ಳುತ್ತಾರೆ. ಅದಕ್ಕಾಗಿ ರಾತ್ರಿ ಹಗಲೆನ್ನದೇ ಸಂಪಾದನೆಯನ್ನು, ಸಂಪಾದನೆಯ ಜೊತೆಗೆ ತನ್ನ ಹವ್ಯಾಸವನ್ನು ಬೆಳೆಸಿಕೊಂಡಿದ್ದಾನೆ. ಪ್ರತಿದಿನ ರಾತ್ರಿ ತಾನು ಸಾಗಿದ ಹಾದಿ ಎಷ್ಟು ಸವೆದಿದೆ ಎಂದು ಮತ್ತೆ ತಿರುಗಿ ನೋಡಿ ನಾಳಿನ ದಾರಿಯ ಕಡೆಗೆ ಇನ್ನೊಮ್ಮೆ ಯೋಚನೆ ಮಾಡಿ ನಿದ್ದೆ ಇಲ್ಲದ ರಾತ್ರಿ ಕಳೆಯುತ್ತಿದ್ದಾನೆ. ಆತನಿಗೆ ಖಂಡಿತವಾಗಿಯೂ ಗೊತ್ತು ತಾನು ದೊಡ್ಡ ವೇದಿಕೆಯಲ್ಲಿ ತಾನನುಭವಿಸಿದ ನೋವನ್ನು ತನ್ನವರು ಮಾಡಿದ ಮೋಸವನ್ನು ಜಗಜ್ಜಾಹೀರು ಮಾಡುತ್ತೇನೆ ಅಂತ. ಅದಕ್ಕಾಗಿ ಆತ ಪರಿಶ್ರಮ ಪಡುತ್ತಲೇ ಇದ್ದಾನೆ. ಭಗವಂತನು ಆತನ ಪರಿಶ್ರಮದ ಬುಟ್ಟಿ ತುಂಬುವುದಕ್ಕೆ ಕಾಯುತ್ತಿದ್ದಾನಂತೆ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ