ಸ್ಟೇಟಸ್ ಕತೆಗಳು (ಭಾಗ ೬೭೨) - ನೀರಿನ ಮಾತು

ಸ್ಟೇಟಸ್ ಕತೆಗಳು (ಭಾಗ ೬೭೨) - ನೀರಿನ ಮಾತು

ಮೊನ್ನೆಯಷ್ಟೇ ನೀರಿನೊಂದಿಗೆ ಮಾತನಾಡಿದ್ದನ್ನ ನಿಮ್ಮಲ್ಲಿ ಹೇಳಿದ್ದೆ. ಅಂದಿಗಿಂತ ಜೋರು ಈ ಸಲಾನೂ ಮಳೆ ಬಂದಿತ್ತು. ಆದರೆ ನೀರು ನನ್ನ ಕೋಣೆನ ಹುಡುಕಿಕೊಂಡು ಬರಲೇ ಇಲ್ಲ. ಯಾಕಿರಬಹುದು? ನೀರಿಗೆ ಏನಾದರೂ ನನ್ನ ಮೇಲೆ ನೋವಾಗಿದ್ಯಾ? ಅಥವಾ ಏನಾದ್ರು ಸಮಸ್ಯೆ? ಆಗಿದ್ಯಾ ಗೊತ್ತಾಗ್ಲಿಲ್ಲ. ಹಾಗಾಗಿ ಕೋಣೆಯಿಂದ ಹೊರಗಡೆ ದೂರದಲ್ಲಿ ಹರಿಯುತ್ತಿದ್ದ ನೀರನ್ನು ನಿಲ್ಲಿಸಿ ಕೇಳಿದೆ. ವಿಷಯ ಏನು ಅಂತ. ಅದಕ್ಕೆ ನೀರು ಹೇಳಿತು ನಾನು ತುಂಬಾ ಸಮಯದ ನಂತರ ಇಲ್ಲಿಗೆ ಬಂದಾಗ ನನಗೆ ಹೋಗೋ ಜಾಗ ಗೊತ್ತಾಗಲಿಲ್ಲ. ಯಾವ ಕಡೆ ಚಲಿಸಬೇಕು ಅಂತ ಗೊತ್ತಾಗಲಿಲ್ಲ. ಮತ್ತೆ ನಾನು ಚಲಿಸುವ ದಾರಿಯನ್ನ ಎಲ್ಲ ಅಡ್ಡ ಗಟ್ಟಿ ಏನೇನೋ ಮಾಡಿಟ್ಟಿದ್ದರು. ಹಾಗಾಗಿ ನಾನು ನಿನ್ನ ಕೋಣೆಯನ್ನು ಹುಡುಕಿಕೊಂಡು ಬಂದಿದ್ದೆ. ನಿನ್ನ ಜೊತೆ ಮಾತನಾಡಿದ್ದೆ ಆದರೆ ಅದಾದ ನಂತರ ನಾನು ಹೋಗುವ ದಾರಿಯನ್ನ ಸ್ವಚ್ಛ ಮಾಡಿದ್ರು ಕೆಲವೊಂದನ್ನು ನಾನೇ ಸ್ವಚ್ಛ ಮಾಡಿಕೊಂಡು ಹೋಗಿಬಿಟ್ಟೆ. ಮತ್ತೆ ನಾನು ಎಲ್ಲಿಂದ ಎಲ್ಲಿಗೆ ತಲುಪಬೇಕು ಅನ್ನೋದು ಕೂಡ ನನಗೆ ಗೊತ್ತಿತ್ತು. ಹಾಗಾಗಿ ನಾನು ನನ್ನ ದಾರಿಯನ್ನು ಹುಡುಕಿಕೊಂಡು ಹೋದೆ. ನಮ್ಮ ಹೋಗುವ ದಾರಿಯ ಬಗ್ಗೆ ಸರಿಯಾದ ತಿಳುವಳಿಕೆ ಮತ್ತು ಎಲ್ಲಿಗೆ ತಲುಪಬೇಕು ಅನ್ನೋದು ಗೊತ್ತಿದ್ದಾಗ ನಾವು ಅನಗತ್ಯವಾಗಿ ಎಲ್ಲಾ ಕಡೆಗೂ ಚಲಿಸುವುದು ತಪ್ಪುತ್ತೆ. ಹಾಗಾಗಿ ಈ ಮಳೆಗಾಲದವರೆಗೆ ನಾನು ನಿನ್ನ ಬಳಿ ಬರುವುದಿಲ್ಲ... ಅಂತ ಹೇಳಿ ನೀರು ಹೋಗೇಬಿಡ್ತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ