ಸ್ಟೇಟಸ್ ಕತೆಗಳು (ಭಾಗ ೬೭೩) - ಖಾನಾವಳಿ
ಊರಿನಲ್ಲಿ ಕೆಲಸ ಒಂದರ ಹುಡುಕಾಟ ಆರಂಭವಾಗಿತ್ತು. ಪ್ರೀತಿಯ ಮಡದಿ, ಇಬ್ಬರ ಸಂಸಾರ ಚೆನ್ನಾಗಿ ಸಾಗಬೇಕು ಅನ್ನುವ ಕಾರಣಕ್ಕೆ ಒಂದಷ್ಟು ಕೆಲಸಗಳನ್ನು ಪ್ರಯತ್ನಿಸಿದರೂ ಅದ್ಯಾವುದೂ ಕೈಹಿಡಿಯಲಿಲ್ಲ. ಹಾಗಾಗಿ ಊರು ಬಿಟ್ಟು ಮಂಗಳೂರಿನ ಕಡೆಗೆ ಪಯಣ ಹೊರಟರು. ಇಲ್ಲಿ ಮೊದಲು ಕೂಲಿ ಕೆಲಸವನ್ನ ಆರಂಬಿಸಿದರು. ಆದರೆ ಸ್ವಂತದ್ದೇನು ಮಾಡಬೇಕು ಅನ್ನುವಂತಹ ಯೋಚನೆ ಅವರದಾಗಿತ್ತು. ಹಾಗಾಗಿ ತರಕಾರಿ ಅಂಗಡಿ ಇಟ್ಟು ಒಂದಷ್ಟು ವ್ಯಾಪಾರವನ್ನು ಮಾಡಿದರು. ಸಮಯಗಳು ಸಾಗಿದರೂ ಜೀವನದಲ್ಲಿ ಅಂತಹ ಬದಲಾವಣೆಗಳು ಏನು ಬರಲಿಲ್ಲ. ಅಗತ್ಯಕ್ಕಾಗಿ ಕೆಲಸ ಮಾಡ್ತಾ ಇದ್ರೆ ಹೊರತು ಅದರಲ್ಲಿ ಪ್ರೀತಿಯಂತೂ ಇರಲಿಲ್ಲ. ಮನೆಯಲ್ಲಿ ಮಾಡುವ ಕೆಲಸವನ್ನೇ ಪ್ರೀತಿಯಿಂದ ಮಾಡುವ ಅನ್ನೋ ಯೋಚನೆಯನ್ನು ಇಟ್ಟುಕೊಂಡು ಜನರಿಗೆ ಉತ್ತರ ಕರ್ನಾಟಕ ಶೈಲಿಯ ಊಟವನ್ನು ನೀಡುವುದಕ್ಕೆ ಆರಂಭ ಮಾಡಿದರು. ಅಲ್ಲಿ ಹೋದರೆ ಊಟದ ಜೊತೆಗೆ ಪ್ರೀತಿಯು ಧಾರಾಳವಾಗಿ ಸಿಗುತ್ತಿತ್ತು. ದಿನ ಕಳೆದಂತೆ ಜನರ ಭೇಟಿ ಹೆಚ್ಚಾಯಿತು. ರುಚಿ ಇಷ್ಟ ಆಯ್ತು. ಬದುಕಿನ ರೀತಿ ಬದಲಾಯಿತು. ಪರಿಚಯವಿಲ್ಲದ ಊರಲ್ಲಿ ಪರಿಚಯಗಳು ಹೆಚ್ಚಾದವು, ದೂರದೂರಿನವರು ಹುಡುಕಿಕೊಂಡು ಬರುವಂತಹ ಒಟ್ಟಿನಲ್ಲಿ ಪ್ರೀತಿಯಿಂದ ಜೊತೆಯಾದ ಪುಟ್ಟ ಜೀವಗಳು ಪ್ರೀತಿಯನ್ನೇ ಉಣ ಬಡಿಸುವುದಕ್ಕೆ ಆರಂಭ ನೀಡಿದವು. ಬದುಕು ಬದಲಾಗುತ್ತಾ ಹೋಯಿತು. ಆಗಾಗ ಜನ ಕಡಿಮೆಯಾದಾಗ ರಸ್ತೆಯಂಚಲಿ ನಿಂತು ಸುತ್ತಾ ಮುತ್ತಾ ನೋಡ್ತಾರೆ. ಆ ದಿನದ ಬದುಕಿಗೋಸ್ಕರ ಇನ್ನೊಂದಷ್ಟು ನಾಲ್ಕು ಜಾಸ್ತಿ ಹೆಜ್ಜೆಗಳು ಅಂಗಡಿಯ ಒಳಗೆ ಬರಬಹುದೆಂಬ ಕುತೂಹಲದಿಂದ ಕಾಯ್ತಾರೆ ದೊಡ್ಡ ಕನಸುಗಳಿವೆ. ಎಲ್ಲವೂ ಪುಟ್ಟ ಹೆಜ್ಜೆಯಿಂದ ಆರಂಭವಾಗಿದೆ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ