ಸ್ಟೇಟಸ್ ಕತೆಗಳು (ಭಾಗ ೬೭೪) - ಒಳ್ಳೆಯವರು
ಅಮ್ಮ, ನೀನು ಹೇಳಿದ ಹಾಗೆ ಮನುಷ್ಯರು ಕೆಟ್ಟವರಲ್ಲ. ನೀನು ಮೊದಲು ಹೇಳ್ತಾ ಇದಿಯಲ್ಲ, ಅವರು ಪರಿಸರವನ್ನು ಹಾಳು ಮಾಡುತ್ತಾರೆ, ಮರಗಳನ್ನ ಕಡಿತಾರೆ, ನಾವೆಲ್ಲೇ ಕಂಡ್ರು ನಮ್ಮನ್ನ ಸಾಯಿಸುವುದಕ್ಕೆ ಪ್ರಯತ್ನ ಪಡ್ತಾರೆ, ಅವರಿಂದ ಆದಷ್ಟು ದೂರವಿರಬೇಕು ಅಂತ. ನಾನು ಹಾಗೆ ಅಂದುಕೊಂಡಿದ್ದೆ. ಅವರೆಲ್ಲಾದರೂ ಕಂಡರೆ ಓಡಿ ಕೂಡ ಹೋಗ್ತಾಯಿದ್ದೆ. ಆದರೆ ಮೊನ್ನೆ ಆ ಜೋರು ಮಳೆಗೆ ನೀನು ಆಹಾರ ತರೋಕೆ ಹೋದವಳು ಬರಲೇ ಇಲ್ಲ. ನಾನು ಮತ್ತು ನನ್ನ ತಮ್ಮ ಇಬ್ಬರೂ ಗಾಳಿ ಜೋರಾಗಿ ಕೈ ತಪ್ಪಿ ಮರದಿಂದ ನೀರಿಗೆ ಬಿದ್ದುಬಿಟ್ಟು ಒದ್ದಾಡ್ತಾ ಉಸಿರಾಡೋದಕ್ಕೆ ಕಷ್ಟ ಪಡ್ತಾ ಕೈಕಾಲು ಬಡಿಯುತ್ತಾ ಇರಬೇಕಾದರೆ ಅವರ್ಯಾರೋ ಬಂದು ಕಾಪಾಡಿದರು. ಆನಂತರ ಕುಡಿಯೋದಕ್ಕೆ ಹಾಲು, ಬೆಚ್ಚಗಿನ ಜಾಗ ಕೊಟ್ಟು ಪ್ರೀತಿ ತೋರಿಸಿ ನಮ್ಮನ್ನು ಮತ್ತೆ ನಿನ್ನ ಬಳಿ ಸೇರುವ ಹಾಗೆ ಮಾಡಿದ್ರು. ಹೀಗಿರುವಾಗ ನಾವು ಅವರನ್ನು ಕೆಟ್ಟವರು ಅಂತ ಹೇಗೆ ಕರೆಯುವುದು.
“ಇಲ್ಲ ಮಗ ಒಳ್ಳೆಯವರು ಇರುತ್ತಾರೆ, ಆದರೆ ಅವರು ಕಾಣಸಿಗುವುದು ಅಪರೂಪ. ನಿನಗೆ ಸಿಕ್ಕಿರೋದು ನಿನ್ನ ಪುಣ್ಯ. ಹಾಗಾಗಿ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ಹಾಕಿ ತೂಗಬೇಡ.”
“ಆಯ್ತಮ್ಮ, ನನ್ನ ಅನುಭವಕ್ಕೆ ಸಿಕ್ಕಿದ ಹಾಗೆ ನಾನವರನ್ನು ನಂಬುತ್ತೇನೆ.”
ನನ್ನ ಹಿಂದಿನ ಮರದಲ್ಲಿ ಕುಳಿತಿದ್ದ ಮಂಗ ಮತ್ತು ಅವುಗಳ ಕುಟುಂಬದ ಮಾತುಕತೆ ಹೇಗಿತ್ತು...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ