ಸ್ಟೇಟಸ್ ಕತೆಗಳು (ಭಾಗ ೬೭೫) - ರೆಕ್ಕೆಗಳು
ಹಕ್ಕಿ ಆಕಾಶದಲ್ಲಿ ಹಾರುತ್ತಾ ಇತ್ತು. ಆ ಕ್ಷಣ ಏನಾಯ್ತು ಗೊತ್ತಿಲ್ಲ ಅದರ ಎರಡು ರೆಕ್ಕೆಗಳು ತುಂಡಾಗಿ ಬಿಡ್ತು. ಹಕ್ಕಿ ನೇರವಾಗಿ ದುಪ್ಪನೆ ನೆಲದ ಮೇಲೆ ಬಿದ್ದುಬಿಡುತ್ತದೆ. ಅದಕ್ಕೆ ತನ್ನ ರೆಕ್ಕೆ ತುಂಡಾಗಿದೆ ಅನ್ನುವ ನೋವಿಗಿಂತ ಮುಂದೆ ತಾನು ಬದುಕಿರುವವರೆಗೂ ಹೀಗೆ ಜೀವನ ಸಾಗಿಸಬೇಕಲ್ಲ ಅನ್ನುವಂತಹ ಯೋಚನೆ ಜಾಸ್ತಿಯಾಗಿತ್ತು. ಮತ್ತೆ ಮತ್ತೆ ಅದೇ ವಿಚಾರವನ್ನು ಚಿಂತಿಸ್ತಾ ಒಂದು ಕಡೆ ಮೂಲೆಗೆ ಒರಗಿಕೊಂಡು ಅಳುವುದಕ್ಕೆ ಆರಂಭ ಮಾಡಿತು. ಕಣ್ಣೀರು ಇಳಿತಾನೆ ಇತ್ತು. ಊಟ ಸೇರುತ್ತಾ ಇಲ್ಲ ಕೆಲವೇ ಕ್ಷಣಗಳಲ್ಲಿ ಸಾವು ಕೂಡ ಆವರಿಸಿಕೊಳ್ಳಬಹುದು. ಹೀಗೆ ಬದುಕುವುದಕ್ಕಿಂತ ಸಾಯುವುದೇ ಮೇಲು ಅನ್ನುವ ಯೋಚನೆ ಆ ಹಕ್ಕಿಯ ತಲೆಯಲ್ಲಿ ಮೊಳಕೆಯೊಡೆಯಿತು. ಆಗ ದೂರದಲ್ಲಿ ಹಾರುತ್ತಿದ್ದ ಅದೇ ಗುಂಪಿಗೆ ಸೇರಿದ ಪಕ್ಷಿ ಈ ಪಕ್ಷಿಯನ್ನು ನೋಡಿ ಹತ್ತಿರ ಹಾರಿ ಬಂದು ಪಕ್ಕದಲ್ಲಿ ಕುಳಿತು ಮಾತನಾಡಲಾರಂಭಿಸಿತು." ನೋಡು ನೀನು ಇಂದಿನವರೆಗೆ ಅಂದುಕೊಂಡಿರುವುದು ಏನು ಅಂತ ಅಂದ್ರೆ ನಿನ್ನ ರೆಕ್ಕೆ ತುಂಡಾದ ತಕ್ಷಣ ನಿನಗೆ ಮತ್ತೊಂದು ರೀತಿಯ ಬದುಕೇ ಇಲ್ಲ ಅಂತ. ಆದರೆ ನೀನು ಮರೆತುಬಿಟ್ಟಿದ್ದೀಯ ನಮಗೆ ಭಗವಂತ ನಮ್ಮ ಸೃಷ್ಟಿಯ ಸಂದರ್ಭದಲ್ಲಿ ನಮ್ಮ ರೆಕ್ಕೆಗಳು ತುಂಡಾದ ನಂತರ ನಾವು ನಡೆದು ಅಭ್ಯಾಸ ಮಾಡಿ ಹಾರೋದಕ್ಕೆ ಪ್ರತಿ ದಿನವೂ ಪ್ರಯತ್ನ ಪಡುತ್ತಾ ಹೋದ ಹಾಗೆ, ಹಾರಬೇಕು ಅನ್ನುವಂತ ಆಲೋಚನೆ ಮನಸ್ಸಿನಲ್ಲಿ ಗಟ್ಟಿಯಾದಷ್ಟು ನಮಗೆ ರೆಕ್ಕೆಗಳು ಮೂಡುತ್ತವೆ. ಹಿಂದಿಗಿಂತಲೂ ಬಲಿಷ್ಠವಾಗಿ ವಿಶಾಲವಾಗಿ ಎಷ್ಟೇ ದೂರಕ್ಕೂ ಹಾರಲು ಸಾಧ್ಯವಾಗುವಂತಹ ರೆಕ್ಕೆಗಳು ಬೆಳೆಯುತ್ತವೆ. ಮೊದಲು ಆ ಆಲೋಚನೆಯನ್ನು ಆರಂಭಿಸು, ನಿನ್ನ ರೆಕ್ಕೆಗಳು ನಿನ್ನನ್ನು ಇನ್ನಷ್ಟು ಎತ್ತರದಿಂದ ಎತ್ತರಕ್ಕೆ ಹಾರುವಂತೆ ಪ್ರೇರೇಪಿಸುತ್ತದೆ. ಆ ಸಾಧ್ಯತೆಗಳನ್ನು ಪ್ರತಿದಿನವೂ ಮಾಡ್ತಾ ಹೋಗು ಒಂದು ದಿನವೂ ಸಾಧ್ಯವಿಲ್ಲ ಅಂತ ಕೂಡಬೇಡ. ರೆಕ್ಕೆ ಬರುವ ದಿನಗಳು ಮುಂದೂಡಲ್ಪಡಬಹುದು... ಧನಾತ್ಮಕ ಪ್ರಯತ್ನ ಇರಲಿ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ