ಸ್ಟೇಟಸ್ ಕತೆಗಳು (ಭಾಗ ೬೭೬) - ಮರೆತರೂ...

ಗೋಡೆಗೆ ಹೊಡೆದ ಮೊಳೆಯ ಕೆಳಗಡೆ ಭಾವಚಿತ್ರವೊಂದು ಬಿದ್ದಿದೆ. ಹೂವಿನ ಹಾರ ಮಾತ್ರ ಇನ್ನು ಹೊಸತರಂತಿದೆ. ವ್ಯಕ್ತಿ ಸತ್ತು ವರ್ಷಗಳೇ ಸಂದರೂ ಮನೆಯವರು ಪ್ರತಿದಿನವೂ ಮತ್ತದೇ ಯೋಚನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಸಮಾಜಕ್ಕೆ ತನ್ನಿಂದ ಏನಾದರೂ ನೀಡಬೇಕು ಸಮಾಜದ ಕಷ್ಟಕ್ಕೆ ಸ್ಪಂದಿಸಬೇಕು ಅನ್ನುವ ಯೋಚನೆಯಿಂದ ಪ್ರತಿದಿನ ತಾನು ಮಾಡುವ ಕೆಲಸವನ್ನು ಕೆಲವೊಂದು ಸಲ ನಿಲ್ಲಿಸಿ ಸಮಾಜದ ಕೆಲಸಕ್ಕೆ ಧಾವಿಸುತ್ತಿದ್ದವ. ಆತನ ಹೆಸರು ಒಂದಷ್ಟು ಕಡೆ ಕೇಳಿ ಬಂದಾಗ ಹಲವಾರು ಜನ ಆತನನ್ನ ಗುರುತಿಸಿ ಇವ ನಮ್ಮವ ಇವ ನಮ್ಮವ ಎಂದು ಎಲ್ಲಾ ಕಡೆಯೂ ಹೇಳಿಕೊಂಡರು. ಮನೆಯಲ್ಲಿ ಅದ್ಭುತವಾದ ಶ್ರೀಮಂತಿಕೆ ಇರಲಿಲ್ಲ ಆತನ ದುಡಿವಿಕೆಯ ಅವಶ್ಯಕತೆಯೂ ಇತ್ತು. ಹೀಗಿರುವಾಗ ಆ ದಿನ ಸಮಾಜದ ಕರೆಗೆ ಸ್ಪಂದಿಸಿ ಮನೆ ಬಿಟ್ಟು ಹೊರಟವ ಮತ್ತೆ ಮನೆಗೆ ತಲುಪಿದ್ದು ಹೆಣವಾಗಿ. ಆ ದಿನ ಮರೆತುಬಿಟ್ಟ ಸಮಾಜ ಇಂದಿನವರೆಗೂ ಅವನನ್ನ ನೆನಪಿಸಿಕೊಳ್ಳಲೇ ಇಲ್ಲ. ಯಾಕೆಂದರೆ ಅವನ ನೆನಪಿನಿಂದ ಯಾವ ಅಗತ್ಯವೂ ಅವರಿಗೆ ಸಿಗುತ್ತಿರಲಿಲ್ಲ. ಸಮಾಜ ಮರೆತುಬಿಟ್ಟಿತ್ತು. ಆತ ಮೇಲೆ ನಿಂತು ಮತ್ತೆ ಯೋಚಿಸುತ್ತಿದಿರಬಹುದು ನಾನು ದುಡಿದ ಸಮಾಜ ನನ್ನ ಮನೆಯವರ ಜೊತೆ ನಿಲ್ಲಲೇ ಇಲ್ವಲ್ಲ ಅಂತ. ಕಣ್ಣೀರು ನಿರಂತರವಾಗಿದೆ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ