ಸ್ಟೇಟಸ್ ಕತೆಗಳು (ಭಾಗ ೬೭೭) - ನೋಟ

ಸ್ಟೇಟಸ್ ಕತೆಗಳು (ಭಾಗ ೬೭೭) - ನೋಟ

ದೇಹಕ್ಕೆ ವರ್ಷಗಳು ಹೆಚ್ಚಾಗ್ತಾ ಇದ್ದಾವೆ. ಜವಾಬ್ದಾರಿಗಳು ಹಾಗೆ ತುಂಬಿಕೊಂಡಿದ್ದಾವೆ. ಮಗ ಶಿಕ್ಷಣ ಪಡೆದು ಕೆಲಸ ಸಂಪಾದಿಸಿದರೂ ಕೂಡ ಅವರ ಜವಾಬ್ದಾರಿ ಇನ್ನು ಮುಗಿದಿಲ್ಲ. ಇದರಲ್ಲಿ ಮಗನ ತಪ್ಪಿದೆ ಅಂತಲ್ಲ ಮಗನಿಗೆ ಸಿಕ್ಕಿರುವ ಕೆಲಸದಲ್ಲಿ ಸಿಗುವ ಸಂಬಳದಲ್ಲಿ ದಿನದೊಡಬಹುದು ಬದುಕು ಸಾಗಿಸಬಹುದು ಅಷ್ಟೇ. ಮಗನಿಗೂ ಒಂದಷ್ಟು ಕನಸುಗಳು ಇರುತ್ತವೆ. ಮನೆಯೂ ಇನ್ನು ಭದ್ರವಾಗಿ ನಿಲ್ಲಬೇಕಾಗಿರುತ್ತದೆ. ಬೆಳಗ್ಗೆಯಿಂದ ಸಂಜೆವರೆಗೆ ಹೋಟೆಲ್ ಗಳಲ್ಲಿ ಕ್ಲೀನಿಂಗ್ ಕೆಲಸ ಮಾಡಿ ಸಂಜೆಯಾದಾಗ ಜಾತ್ರೆಗಳಿಗೆ ಹೋಗಿ ತಿಂಡಿಗಳನ್ನು ಮಾರಾಟ ಮಾಡಿ ಬರ್ತಾರೆ. ಅವರಿಗೆ ಸಿಗೋ ದುಡ್ಡಿನಿಂದ ಐಶಾರಾಮಿ ಜೀವನವನ್ನು ಸಾಧಿಸಬೇಕು ಅನ್ನುವ ಆಸೆ ಇಲ್ಲ ಹುಟ್ಟಿನಿಂದ ಇಂದಿನವರೆಗೂ ಏನೋ ಬದಲಾವಣೆ ಕಾಣದ ಬದುಕು, ಮಗನಿಗೆ ಕೆಲಸ ಸಿಕ್ಕಿದರು ಕೂಡ ಜವಾಬ್ದಾರಿಗಳು ಹೆಚ್ಚಾಗಿ ಸಂಪಾದನೆ ಆ ದಾರಿಯನ್ನು ಹಿಡಿದುಬಿಟ್ಟಿದೆ. ಅದಕ್ಕಾಗಿ ದುಡಿಯುತ್ತಿದ್ದಾರೆ. ದೇಹ ಭಾಗಿದೆ ಶಕ್ತಿ ಸಾಕಾಗುತ್ತಿಲ್ಲ. ಆದರೂ ರಾತ್ರಿ ಹಗಲೆನ್ನದೇ ದುಡಿಯುತ್ತಿದ್ದಾರೆ. ದೇಹ ಪ್ರತಿದಿನ ವಿಶ್ರಾಂತಿ ಕೇಳಿದರೂ ಹೇಗೂ ಸತ್ತ ಮೇಲೆ ಸಿಗುವ ವಿಶ್ರಾಂತಿ ಇದೆಯಲ್ಲ ಅಂದುಕೊಂಡು ಆರೋಗ್ಯ ಸರಿ ಇಲ್ಲದಿದ್ದರೂ ಮಳೆ ಚಳಿ ಗಾಳಿ ಎನ್ನದೆ ತನ್ನ ಕೆಲಸವನ್ನ ಪ್ರೀತಿಯಿಂದ ಮಾಡ್ತಾ ಇದ್ದಾರೆ. ಕೆಲಸದ ಮೇಲೆ ಪ್ರೀತಿ ಇದೆ ಆದರೆ ಬದುಕು ಬದಲಾಗುತ್ತಿಲ್ಲ ಅನ್ನುವ ನೋವು ಕೂಡ. ಊರ ಜಾತ್ರೆಗಳಲ್ಲಿ ಎಲ್ಲರ ಮನೆಯವರ ಸಂಭ್ರಮದ ಮುಖಗಳು ಓಡಾಡುತ್ತಿದ್ದರೆ ಇವರು ತನ್ನ ಮನೆಯವರನ್ನ ಕರೆದುಕೊಂಡು ಹೋಗಲಾಗುತ್ತಿಲ್ಲವಲ್ಲ ಅನ್ನುವ ನೋವಿನಿಂದ ಮತ್ತದೇ ಜನಜಂಗುಳಿಯನ್ನು ನೋಡುತ್ತಿದ್ದಾರೆ. ಭಗವಂತ ಗುಡಿಯೊಳಗಿಂದ ಕಣ್ ತೆರೆಯಬೇಕಷ್ಟೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ