ಸ್ಟೇಟಸ್ ಕತೆಗಳು (ಭಾಗ ೬೭೯) - ಬದಲಾವಣೆ

ಸ್ಟೇಟಸ್ ಕತೆಗಳು (ಭಾಗ ೬೭೯) - ಬದಲಾವಣೆ

ಮನೆಗಿಂತ ಒಂದು ಐದು ಕಿಲೋಮೀಟರ್ ದೂರ ಚಲಿಸಬೇಕು ಅಲ್ಲಿ ಒಂದು ಜಲಪಾತ ಇದೆ. ಅದು ಮೊದಲಿನಿಂದಲೂ ಇದ್ದದ್ದೇ. ಆದರೆ ಅದಕ್ಕೆ ಅಷ್ಟು ಪ್ರಚಾರ ಸಿಕ್ಕಿರಲಿಲ್ಲ. ಅದರ ಪಕ್ಕದಲ್ಲಿ ಇನ್ನೊಂದು ಜಲಪಾತ ಇದೆ ಅದನ್ನ ನೋಡೋದಕ್ಕೆ ಜನ ಅಷ್ಟು ಬರ್ತಾ ಇಲ್ಲ .ಈ ಜಲಪಾತ ಒಂದಷ್ಟು ಎತ್ತರದಿಂದ ಧುಮುಕುತ್ತದೆ ಆದರೆ ಧುಮುಕುವಾಗ ತನ್ನ ಓರೆ ಕೋರೆಗಳನ್ನ ಎಲ್ಲ ತೋರಿಸಿಕೊಂಡು ಬಳುಕುತ್ತಾ ಹಾರುತ್ತಾ ವಕ್ರ ವಕ್ರವಾಗಿ ಚಲಿಸುತ್ತಾ ನೊರೆಗಳನ್ನು ಸೃಷ್ಟಿಸುತ್ತಾ ಧುಮುಕಿ ಮತ್ತೆ ಹರಿಯುವುದಕ್ಕೆ ಆರಂಭವಾಗುತ್ತೆ. ಹಾಗೆ ಹರಿದು ಹೋಗುವಾಗಲೂ ಕೂಡ ನೇರವಾಗಿ ಹರಿಯದೆ ಏರುತ್ತಾ ಇಳಿಯುತ್ತಾ ತಿರುಗುತ್ತಾ ಚಲಿಸುತ್ತಿದೆ. ಶಬ್ದ ಮಾಡಿದ ಕಾರಣ ಜನರ ಗಮನ ಹೆಚ್ಚಾಗಿದೆ. ಅಲ್ಲದೆ ಅಡ್ಡಾದಿಡಿಯಾಗಿ ವಕ್ರವಾಗಿ ಚಲಿಸುವುದರಿಂದ ಜನ ಹೆಚ್ಚೆಚ್ಚು ಬಂದು ಅದರ ಸೌಂದರ್ಯವನ್ನು ಗಮನಿಸುತ್ತಾರೆ. ವಿಶೇಷವಾಗಿ ಒಂದಷ್ಟು ಕಷ್ಟಗಳು ತೊಂದರೆಗಳು ಕಠಿಣ ಪರಿಸ್ಥಿತಿಗಳು ಓರೆ ಕೋರೆಗಳು ಎಲ್ಲವೂ ಇದ್ದಾಗ ಮಾತ್ರ ನಾವು ವಿಶೇಷವಾಗ್ತೇವೆ. ಜನ ನಮ್ಮನ್ನು ಗಮನಿಸುತ್ತಾರೆ .ನೇರವಾದ ತಣ್ಣಗೆ ಹರಿಯುವ ನದಿಗಿಂತ ಆಗಾಗ ಜಲಪಾತಗಳಾಗುತ್ತಾ ಹೋದರೆ ಬದುಕು ಸುಂದರವಾಗಿರುತ್ತದೆ ನಮಗೂ ಮತ್ತು ನೋಡುವರಿಗೂ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ