ಸ್ಟೇಟಸ್ ಕತೆಗಳು (ಭಾಗ ೬೮೪) - ಆಕೆಯ ಪ್ರಶ್ನೆ

ಅವಳ ಪ್ರಶ್ನೆಗೆ ಯಾರು ಉತ್ತರಿಸುತ್ತಿಲ್ಲ ಸುಮ್ಮನೆ ತಲೆ ತಗ್ಗಿಸಿ ನಿಂತುಬಿಟ್ಟಿದ್ದಾರೆ. ಅದು ತುಂಬಾ ಖಾರವಾಗಿತ್ತು ಅನಿಸುತ್ತೆ. ವರ್ಷಗಳು ಹಲವಾರು. ಇಂದಿನವರೆಗೂ ನ್ಯಾಯಾಲಯದಲ್ಲಿ ಹೆಣ್ಣಿಗೆ ತೊಂದರೆ ನೀಡಿದವರಿಗೆ ಯಾಕೆ ಕಠಿಣ ಶಿಕ್ಷೆಯಾಗುತ್ತಿಲ್ಲ? ಮಾನ ಕಳೆದುಕೊಂಡು ಪ್ರಾಣ ಕಳೆದುಕೊಂಡು ದಿಕ್ಕಿಲ್ಲದೆ ಸತ್ತವರ ಮನೆಯವರಿಗೆ ಉತ್ತರವನ್ನು ಎಂದು ಕೊಡುತ್ತೀರಿ? ಜೈಲಿನೊಳಗೆ ತಪ್ಪಿತಸ್ಥರನ್ನು ಕೂಡಿ ಹಾಕಿ ಒಂದಷ್ಟು ವರ್ಷಗಳ ನಂತರ ಅವತ ಒಳಿತಿನ ಕ್ರಮಕ್ಕಾಗಿ ಅವರನ್ನು ಬಿಡುಗಡೆ ಮಾಡುತ್ತಿದ್ದೇವೆ ಅನ್ನುವ ಮಾತು ಬಂದಾಗ ಚಿತ್ರಹಿಂಸೆಯಿಂದ ಮರಣವನ್ನ ಅನುಭವಿಸಿದ ಆ ಹೆಣ್ಣಿನ ಗೋರಿಯ ಪ್ರಶ್ನೆಗೆ ಉತ್ತರಿಸುವವರು ಯಾರು? ಅಲ್ಲೊಬ್ಬ ಮನೆ ಸುಟ್ಟು ಹೋಯಿತು, ಇನ್ಯಾರೋ ಪ್ರಾಣ ಕಳೆದುಕೊಂಡರು, ಇನ್ಯಾರಿಗೋ ಪ್ರಾಣ ಹಾನಿಯಾಯಿತು ಮನೆಯವರು ಮಗನನ್ನು ಕಳೆದುಕೊಂಡು ಹೀಗೆಲ್ಲಾ ಕಳೆದುಕೊಂಡವರ ಪಟ್ಟಿ ದೊಡ್ಡದಿರುವಾಗ ಈ ಎಲ್ಲದಕ್ಕೂ ಕಾರಣರಾದವರು ಜೈಲಿನ ಒಳಗೆ ಒಂದಷ್ಟು ಸಮಯ ಶಿಕ್ಷೆಯನ್ನ ಅನುಭವಿಸಿ ಮತ್ತೆ ಹೊರಗಡೆ ಬರುವುದಕ್ಕೆ ಅನುಮತಿ ಸಿಕ್ಕಿರುವುದು ಏನಕ್ಕೆ? ತಪ್ಪು ಮಾಡಿದವನು ಜೀವನಪೂರ್ತಿ ಶಿಕ್ಷೆಯನ್ನು ಅನುಭವಿಸಲೇಬೇಕು. ತಪ್ಪು ಮಾಡಿದರೆ ಮುಂದೆ ತನ್ನ ಜೀವನವೇ ಇಲ್ಲ ಅನ್ನುವಂತಹ ಭಯ ಯಾರ ಮನಸ್ಸಿನಲ್ಲೂ ಬರದೇ ಹೋದರೆ ಆತನಿಗೆ ತಪ್ಪು ಮಾಡದೇ ಇರುವುದಕ್ಕೆ ಕಾರಣ ಸಿಗುವುದಾದರೂ ಹೇಗೆ? ಬದಲಾವಣೆಗಳು ಹಾಗೂ ತಪ್ಪಿನ ಬಗ್ಗೆ ಭಯ ಉಂಟಾಗುವುದು ಯಾವಾಗ? ಕಣ್ಣೀರಿಡುತ್ತಿರುವವರಿಗೆ ತಮ್ಮವರು ಬಾರದಿದ್ದರೂ ತಪ್ಪಿತಸ್ಥರಿಗೆ ಶಿಕ್ಷೆ ಸಿಕ್ಕಿದೆ ಅನ್ನುವ ನೆಮ್ಮದಿಯ ಯೋಚನೆ ಬರುವುದಾದರೂ ಯಾವಾಗ? ಎಲ್ಲಾ ಪ್ರಶ್ನೆಗಳಿಗೆ ಸಾಧ್ಯವಾದರೆ ಉತ್ತರಿಸಿ. ಮತ್ತೆ ಸಮಾಜದಲ್ಲಿ ಬದಲಾವಣೆ ಮಾತುಗಳನ್ನಾಡಿ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ