ಸ್ಟೇಟಸ್ ಕತೆಗಳು (ಭಾಗ ೬೮೫) - ಸಂತೆಯ ಬದುಕು

ಬದುಕನ ಹೇಗಂತ ಅರ್ಥೈಸಿಕೊಳ್ಳುವುದು ಬದುಕನ್ನ ಸರಿಯಾಗಿ ಕಲಿಸುವ ತಿಳಿದ ವ್ಯಕ್ತಿಗಳು ಯಾರಿದ್ದಾರೆ? ಎಲ್ಲರಿಂದ ಒಂದೊಂದು ಪಾಠಗಳನ್ನು ಕಲಿತು ನನ್ನ ಬದುಕನ್ನ ಸುಂದರವಾಗಿಸಿಕೊಳ್ಳುವುದಕ್ಕೆ ಯಾರ ಸಹಾಯ ಪಡೆಯಲಿ ಹೀಗಂತ ಯೋಚನೆಯಲ್ಲಿ ಕುಳಿತಿದ್ದ ನನ್ನ ಬಳಿಗೆ ಗಣೇಶಣ್ಣ ಬಂದಿದ್ದರು. ಅವರು ತುಂಬಾ ಓದಿದವರಲ್ಲ ತನ್ನ ಕುಟುಂಬವನ್ನು ನಿರ್ವಹಿಸೋಕೆ ಓದಿ ಕೆಲಸವನ್ನು ಸಂಪಾದಿಸಿ ಎಲ್ಲರ ಜೊತೆ ನೆಮ್ಮದಿಯಿಂದ ಬದುಕುತ್ತಿರುವವರು. ಅವರ ಜೀವನದಲ್ಲೂ ಒಂದಷ್ಟು ಸಮಸ್ಯೆಗಳಿದೆ. ಆ ದಿನ ಶನಿವಾರವಾದ್ದರಿಂದ ಅಲ್ಲೇ ನಡೆಯುವ ಸಂತೆಗೆ ಕರೆದುಕೊಂಡು ಹೋಗಿ ಅಡ್ಡಾಡಿಕೊಂಡು ಬರುವುದಕ್ಕೆ ಹೇಳಿದರು. ಆ ಸಂತೆಯ ಒಳಗೆ ಬದುಕಿನ ನಿಜದ ಹೆಣಕಾಟಗಳು ನಡೀತಾ ಇತ್ತು. ಕಿಸೆಯಲ್ಲಿ ತುಂಬಿಸಿಕೊಂಡ ದುಡ್ಡಿಗೆ ಹೆಚ್ಚಿನ ವಸ್ತು ತೆಗೆದುಕೊಂಡು ಹೋಗುವುದಕ್ಕೆ ಕಾಯುತ್ತಿದ್ದ ಒಂದಷ್ಟು ಜನ. ತಂದದ್ದು ಮಾರಾಟವಾಗಲಿ ಅನ್ನೋ ಕಾರಣಕ್ಕೆ ಕಿರುಚಿ ಕಿರುಚಿ ಬೊಬ್ಬಿಡುತ್ತಿದ್ದ ಇನ್ನೊಂದಷ್ಟು ಜನ. ಒಬ್ಬರು ಕೂಡ ಶೋಕಿಗಾಗಿ ಕೆಲಸವನ್ನು ಮಾಡ್ತಾ ಇರಲಿಲ್ಲ. ಮಾರಾಟವಾದ ದುಡ್ಡು ಯಾರಿಗೂ ಶಿಕ್ಷಣಕ್ಕೆ, ಇನ್ಯಾರಿಗೋ ಹಸಿವಿಗೆ, ಇನ್ಯಾರಿಗೋ ಸಾಲ ಕಟ್ಟುವುದಕ್ಕೆ, ಇನ್ಯಾರಿಗೋ ದಿನದೂಡೊದಕ್ಕೆ ಹೀಗೆ ಒಬ್ಬೊಬ್ಬರಿಗೆ ಒಂದೊಂದು ಕಾರಣಕ್ಕೆ ಬಳಕೆಯಾಗುತ್ತಿತ್ತು. ಒಬ್ಬೊಬ್ಬರು ಒಂದೊಂದು ಬದುಕಿನ ಪಾಠಗಳನ್ನು ಹೇಳುತ್ತಿದ್ದರು. ಒಂದು ಗಂಟೆ ಅಡ್ಡಾಡಿದ್ದಕ್ಕೆ ಇಡೀ ಜೀವನದ ದರ್ಶನವೇ ಆಗಿ ಹೋಯಿತು. ಆ ಗದ್ದಲಗಳ ನಡುವೆ ಮಾತು ಮಾತನಾಡುತ್ತಿತ್ತು ಮೌನವೂ ಮಾತನಾಡುತ್ತಿತ್ತು, ಕಣ್ಣು ಕೈಗಳು ಮಾತನಾಡುತ್ತಿದ್ದವು. ಪ್ರತಿ ಒಂದನ್ನು ಗಮನಿಸಿ ಅರ್ಥೈಸಿಕೊಂಡು ಸಂತೆಯಿಂದ ಹೊರಗೆ ಬಂದಾಗ ವಿವಿಧ ರೀತಿಯ ಜೀವನ ಕಣ್ಣ ಮುಂದೆ ನಿಂತಿತ್ತು. ಇದಿಷ್ಟೇ ಸಾಕಾಗಲ್ಲ ಆದರೆ ಇನ್ನೊಂದಷ್ಟು ಹೆಜ್ಜೆಗಳನ್ನು ಸಾಗಿಸೋಕೆ ಈ ಪಾಠ ಸಾಕು. ಮುಂದೆ ಮತ್ತೊಂದು ಸಲ ಜೀವನದ ಪಾಠ ಬೇಕಾದಾಗ ಇನ್ನೊಂದು ದಿಕ್ಕಿನ ಕಡೆ ಹೊರಡಬೇಕು ಎಲ್ಲಾ ಕಡೆಯಿಂದಲೂ ಉತ್ತರಗಳು ಸಿಕ್ತಾ ಇರುತ್ತವೆ ಪ್ರಶ್ನೆಗಳನ್ನ ಮನಸ್ಸಲ್ಲಿಟ್ಟುಕೊಂಡು ಹುಡುಕೋದಕ್ಕೆ ಪ್ರಾರಂಭ ಮಾಡಬೇಕು... ಸಂತೆಯ ಜೊತೆ ಸಂಶಯಗಳು ಸದ್ಯಕ್ಕೆ ಖಾಲಿಯಾದವು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ