ಸ್ಟೇಟಸ್ ಕತೆಗಳು (ಭಾಗ ೬೯೧) - ಆವರಣ
ಕೋರ್ಟಿನ ಹೊರಗಡೆ ಸರದಿಗಾಗಿ ಅವರಿಬ್ಬರೂ ಕಾಯುತ್ತಿದ್ದಾರೆ. ಇಬ್ಬರು ಅಲ್ಲಿಗೆ ಹಲವು ಬಾರಿ ಬಂದಿದ್ದಾರೆ. ಬಂದಾಗ ವಾದ ವಿವಾದಗಳಾಗಿದ್ದಾವೆ, ಉತ್ತರಗಳು ಸಿಕ್ಕಿದ್ದಾವೆ. ಅವರಿಬ್ಬರಿಗೆ ಒಬ್ಬರನ್ನೊಬ್ಬರು ತೊರೆದು ಹೋಗಬೇಕಂತೆ. ಅವರಿಷ್ಟದ ಪ್ರಕಾರ ಬದುಕಬೇಕಂತೆ, ದಿನ ತಿಂಗಳು ವರ್ಷಗಳಾದರೂ ಇನ್ನೂ ಅರ್ಥ ಮಾಡಿಕೊಂಡಿಲ್ಲ ಅವರಿಬ್ಬರೂ. ಇಬ್ಬರ ಮನಸ್ಸಿನೊಳಗೂ ಒಂದೊಂದು ಕಥೆಗಳನ್ನ ತುಂಬಿಸಿಕೊಂಡಿದ್ದಾರೆ. ಅವಳ ಮನಸಿನೊಳಗೆ ಅವಳೇ ಕಟ್ಟಿಕೊಂಡ ಗೋಪುರದ ಕನಸುಗಳು, ಅವನ ಮನಸ್ಸಿನೊಳಗೆ ಹರಡಿಕೊಂಡಿರುವ ಮೈದಾನದಂತ ಕನಸುಗಳು. ಊರವರ ಬಾಯಲ್ಲಿ ಸೇರಿದವರ ಸಮ್ಮುಖದಲ್ಲಿ ಸಾವಿರದ ಎಂಟು ಕಥೆಗಳು. ಅವರಿಬ್ಬರು ಎದುರು ಬದುರು ಕುಳಿತು ತಮ್ಮ ತಮ್ಮ ಕಥೆಗಳನ್ನ ಹಂಚಿಕೊಂಡು ನೋವುಗಳಿಗೆ ಧನಿಯಾಗುತ್ತಾ, ಸಮಸ್ಯೆಗಳಿಗೆ ಉತ್ತರವಾಗುತ್ತಾ ಊರವರ ಬಾಯಲ್ಲಿ ಹರಡುತ್ತಿರುವ ಕಥೆಗಳಿಗೊಂದು ಪೂರ್ಣ ವಿರಾಮ ನೀಡುತ್ತಾ, ಒಂದೇ ಕಥೆಯಾಗಿ ಜೀವನದ ಸೇತುವೆಯ ದಾಟಬಹುದಲ್ಲವೇ? ಇದು ಅವರಿಗೆ ತಿಳಿಯುತ್ತಿಲ್ಲವೋ ಅಥವಾ ಮನಸು ಬಿಡುತ್ತಿಲ್ಲವೋ?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ