ಸ್ಟೇಟಸ್ ಕತೆಗಳು (ಭಾಗ ೬೯೨) - ಒಳಗಿನ ಮಾತು

ಸ್ಟೇಟಸ್ ಕತೆಗಳು (ಭಾಗ ೬೯೨) - ಒಳಗಿನ ಮಾತು

ನಮ್ಮ ಬದುಕಿನ ಜಾಗವಿದು. ಇದನ್ನು ಬಿಟ್ಟು ಇನ್ನೊಂದು ಬದುಕಿದೆ ಅನ್ನೋದು ನಮಗೆ ಇಷ್ಟರವರೆಗೂ ಎಲ್ಲಿಯೂ ತಿಳಿದು ಬರಲಿಲ್ಲ. ಸುತ್ತಮುತ್ತ ಒಂದು ಪಂಜರ, ನನ್ನಂತೆ ಹಲವಾರು ಜನ ಯಾರನ್ನ ಅಂತ ಪರಿಚಯ ಇಟ್ಟುಕೊಳ್ಳುವುದು. ನಮ್ಮಿಂದ ಕಾಣೆಯಾಗುತ್ತಾರೆ, ಹೊಸಬರು ಪ್ರವೇಶವಾಗುತ್ತಾರೆ. ಆಗಾಗ ನಮ್ಮನ್ನ ಎತ್ತಿ ನೋಡಿ ಕೆಲವೊಂದು ಸಲ ಬಿಟ್ಟು ಹೋಗ್ತಾರೆ, ಇನ್ನೊಬ್ಬರನ್ನು ತೆಗೆದುಕೊಂಡು ಹೋಗುತ್ತಾರೆ. ಆಗ ಒಂದು ಸಲ ಕಿರುಚಾಟದ ಶಬ್ದ ಕೇಳುತ್ತೆ. ಉರುಳಾಟದ ನರಳಿಕೆ ಕೇಳುತ್ತೆ. ತಿನ್ನೋದಕ್ಕೆ ಸಿಕ್ಕಿದಾಗ ಸಂಭ್ರಮದಿಂದ ತಿಂದುಬಿಡುತ್ತೇವೆ. ನಮಗೆ ಮುಂದೇನಾಗುತ್ತೆ ಅನ್ನೋದರ ಅರಿವು ಒಂದಿನಿತು ಇಲ್ಲ. ಸಾವು ಯಾವತ್ತೂ ನಮ್ಮ ಮೇಲೆ ಬೀಳುತ್ತೊ ಗೊತ್ತಿಲ್ಲ. ನನ್ನನ್ನು ನೋಡಿ ಅವರು ತೆಗೆದು ಕೊಂಡು ಹೋಗುತ್ತಾರೆ ಅಲ್ಲಿ ನಮಗೆ ಪ್ರತಿದಿನ ಆಹಾರವನ್ನು ಹಾಕ್ತಾರೋ ಗೊತ್ತಿಲ್ಲ. ಪ್ರಶ್ನೆಗಳೇ ತುಂಬಿದ ಬದುಕು ನಮ್ಮದು ತಿನ್ನುವುದು ಬಿಟ್ಟು ಬೇರೇನೂ ಗೊತ್ತಿಲ್ಲ. ಇದು ಉದ್ಯಾವರದ ಕೋಳಿ ಅಂಗಡಿ ಮುಂದೆ ಹಾದು ಹೋಗುವಾಗ ಒಳಗಿನಿಂದ ಕೇಳಿ ಬರುತ್ತಿದ್ದ ಮಾತುಗಳು. ಪ್ರಶ್ನೆಗಳು ನಮಗೂ ಮಾತ್ರ ಅಲ್ಲ ಅವುಗಳಿಗೂ ಇದಾವೆ ಅಂತ ಗೊತ್ತಾಯ್ತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ