ಸ್ಟೇಟಸ್ ಕತೆಗಳು (ಭಾಗ ೬೯೪) - ಪರದೆಯ ಕತೆ

ಸ್ಟೇಟಸ್ ಕತೆಗಳು (ಭಾಗ ೬೯೪) - ಪರದೆಯ ಕತೆ

ಕಾರ್ಯಕ್ರಮವನ್ನು ಚಂದಗಾಣಿಸಲು ಗೋಡೆಯ ಮುಂದೊಂದು ಪರದೆಯನ್ನು ಹಾಕಿದ್ದಾರೆ. ಆ ಪರದೆಯ ಮೇಲೆ ಇನ್ನೊಂದಷ್ಟು ಪರದೆಗಳನ್ನ ಜೋಡಿಸಿ ಅದರ ಬಣ್ಣವನ್ನು ಅದರ ಮೆರುಗನ್ನ ಇನ್ನಷ್ಟು ಹೆಚ್ಚಿಸಿದ್ದಾರೆ. ಕಾರ್ಯಕ್ರಮವೇನೋ ಸಾಂಗವಾಗಿ ನೆರವೇರಿತು, ಇನ್ನೊಂದು ಕಾರ್ಯಕ್ರಮಕ್ಕೆ ಮತ್ತದೇ ಪರದೆಯನ್ನು ಬಳಸಬೇಕು ಮತ್ತೆ ಅದನ್ನ ತೆಗೆದು ಇನ್ನೊಂದು ಕಡೆಗೆ ಜೋಡಿಸಲು ಮೊದಲು ಕೆಲಸ ಮಾಡಿದವ ಬರಲಿಲ್ಲ. ಹಾಗಾಗಿ ಆ ಜವಾಬ್ದಾರಿ ಇನ್ಯಾರದೋ ಹೆಗಲಿಗೇರಿ ಅವರು ಅದನ್ನ ಬಿಚ್ಚಿ ಮುದ್ದೆ ಮಾಡಿ ಇನ್ನೊಂದು ಕಡೆ ಇಟ್ಟು ತೆರಳಿ ಬಿಟ್ಟರು. ಮರುದಿನ ಜೋಡಿಸುವ ಸರದಿ ಮತ್ತೆ ಮೊದಲಿನವರಿಗೆ. ಆದರೆ ಯಾರು ತೆಗೆದಿದ್ದಾನಲ್ಲ ಆತ ತೆಗೆದ ವಿಧಾನವೇ ಮಡಚಿಟ್ಟ ರೂಪವೇ ಅರ್ಥವಾಗುತ್ತಿಲ್ಲ. ಮತ್ತದನ್ನ ಸರಿಪಡಿಸುವುದು ಹೇಗೆಂದು ಗೊತ್ತಾಗದೆ ಎಲ್ಲ ಜೋಡಿಸಿಟ್ಟ ಬಟ್ಟೆಗಳನ್ನ ತೆಗೆದು ಮತ್ತೆ ಮೂಲ ರೂಪಕ್ಕೆ ತಂದು ಮತ್ತೆ ಪರದೆ ಜೋಡಿಸುವ ಕೆಲಸಕ್ಕೆ ಕೈಹಾಕಿಬಿಟ್ಟ. ಅವನು ಮಾಡುತ್ತಿದ್ದ ಕೆಲಸದಲ್ಲಿ ಸುಮಾರು ೨ ಗಂಟೆ ಇಲ್ಲೇ ವ್ಯರ್ಥವಾಗಿ ಹೋಯಿತು. ಅವನಿಗೆ ತನ್ನ ವೈಯಕ್ತಿಕ ಬದುಖು ಕಣ್ಣ ಮುಂದೆ ಬಂದಿತು. ಒಂದಷ್ಟು ಮಾತುಕತೆಗಳು ವಿಚಾರಗಳು ಯಾರೋ ಹೇಳಿದ್ದನ್ನ ಕೇಳಿಕೊಂಡು ಅದಕ್ಕೆ ಇವನದೇ ರೂಪದಲ್ಲಿ ಪರಿಹಾರವನ್ನು ಕೊಡುತ್ತಿದ್ದಂತಹ ಮಾತುಗಳು, ಎಲ್ಲಾ ಸಮಸ್ಯೆಗಳಿಗೂ ಒಂದೇ ಉತ್ತರವನ್ನು ಹುಡುಕಲು ಪ್ರಯತ್ನ ಪಡ್ತಾ ಹೋದದ್ದು ಇದೆಲ್ಲವೂ ತಾನು ವೈಯಕ್ತಿಕವಾಗಿ ಮಾಡಿದ ತಪ್ಪು ಅನ್ನೋದು ತಾನು ಬಿಡಿಸುತ್ತಿದ್ದ ಪರದೆಯನ್ನು ನೋಡುವಾಗ ಆತನಿಗೆ ಅರಿವಾಯಿತು. ಯಾರೋ ಮಾಡಿದ ತಪ್ಪಿನಿಂದ ಆತನಿಗೆ ಪರದೆ ಬಿಡಿಸುವಾಗ ಜ್ಞಾನೋದಯವಾಯಿತು. ಈ ದಿನ ಪರದೆಗೂ ತುಂಬಾ ಖುಷಿ ನಾನು ಒಬ್ಬನ ಬದುಕಿನ ಒಂದಷ್ಟು ಸತ್ಯಗಳನ್ನ ಅರ್ಥ ಮಾಡಿಸಿಬಿಟ್ಟೆನಲ್ಲ ಎಂದು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ