ಸ್ಟೇಟಸ್ ಕತೆಗಳು (ಭಾಗ ೬೯೫) - ಕಾಯುತ್ತಾರೆ

ಕಾಯುವುದರಲ್ಲಿ ನೋವಿದೆಯೋ ಬೇಸರವಿದೆಯೋ ಖುಷಿ ಇದ್ಯೋ ಭಯವಿದೆಯೋ ಕಾತುರವಿದೆಯೋ ಆತಂಕವಿದೆಯೋ ಇದು ನನಗೆ ಅರ್ಥವಾಗ್ತಾ ಇಲ್ಲ. ಎಲ್ಲರೂ ಕಾಯುವವರೇ. ಬೆಳಗ್ಗೆ ಐದು ಗಂಟೆಗೆ ಅಂಗಡಿ ತೆರೆದು ಈ ದಿನ ಜನ ಎಷ್ಟು ಬರಬಹುದು ಅಂತ ಗಲ್ಲದ ಮೇಲೆ ಕೈ ಇಟ್ಟು ಆತ ಕಾಯುತ್ತಾನೆ, ಪರೀಕ್ಷೆಗಿನ್ನು ಒಂದು ಗಂಟೆ ಇದೆ ಓದಿ ಆಗಲಿಲ್ಲ ಪ್ರಶ್ನೆ ಪತ್ರಿಕೆ ಹೇಗಿರಬಹುದು ಅಂತ ವಿದ್ಯಾರ್ಥಿ ಕಾಯುತ್ತಾನೆ, ಕೆಲವೇ ಗಂಟೆಗಳಲ್ಲಿ ಫಲಿತಾಂಶ ಬರುವುದಕ್ಕಿದೆ ಏನಾಗಬಹುದು ಅನ್ನುವ ಕಾತುರತೆಯ ಭಯದಿಂದ ಕಾಯ್ತಾ ಇದ್ದಾನೆ. ಮೊಟ್ಟಮೊದಲ ಬಾರಿ ಅವಳನ್ನ ಭೇಟಿಯಾಗ್ತಾ ಇದ್ದಾನೆ ಅವಳನ್ನ ಎದುರುಗೊಳ್ಳುವುದು ಹೇಗೆ? ನನ್ನನ್ನು ನೋಡಿ ಹೇಗೆ ಅವಳು ನಗು ಚೆಲ್ಲಬಹುದು ಅಂತ ಸಂಭ್ರಮದ ಕಾತುರತೆಯಿಂದ ಕಾಯ್ತಾ ಇದ್ದಾನೆ. ಸಂಸ್ಥೆಯೊಂದನ್ನು ಕಟ್ಟಿಯಾಗಿದೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಯೋಚನೆ ಬಂದಾಗಿದೆ ದೂರದೂರಿನ ವಿದ್ಯಾರ್ಥಿಗಳು ಯಾವಾಗ ಸಂಸ್ಥೆಯೊಳಗೆ ಕಾಲಿಡುತ್ತಾರೋ ಅಂತ ಆತ ಕಾಯುತ್ತಿದ್ದಾನೆ, ಬೆಳಗಿನ ತಿಂಡಿ ಬಂದಿಲ್ಲ ಅಂತ ಜೊತೆಯಲ್ಲಿ ಕೂತ ನಾಯಿ ಕಾಯ್ತಾ ಇದೆ, ಕೆಲಸಕ್ಕೆ ಅರ್ಜಿ ಹಾಕಿ ಆಗಿದೆ ಸಂದರ್ಶನವೂ ನಡೆಸಿಯಾಗಿದೆ ಕೆಲಸ ಯಾವಾಗ ಸಿಗ್ತದೆ ಅಂತ ಮನೆ ಒಳಗೆ ಕುಳಿತ ನಿರುದ್ಯೋಗಿ ಕಾಯುತ್ತಿದ್ದಾನೆ, ಭಗವಂತ ಈ ಭೂಮಿಗೆ ಕಳುಹಿಸುವಾಗ ಎಲ್ಲರ ಜೀವನದಲ್ಲೂ ಕಾಯುವಿಕೆಯನ್ನ ಸೃಷ್ಟಿಸಿ ಹೋಗಿದ್ದಾನೆ. ಕೆಲವರು ಸ್ವಲ್ಪ ಹೆಚ್ಚೇ ಕಾಯಬೇಕಾಗುತ್ತದೆ. ಇನ್ನು ಕೆಲವರು ಅಷ್ಟು ಕಾಯಬೇಕಾಗಿರುವುದಿಲ್ಲ. ಆದರೆ ಕಾಯುವಿಕೆ ಮಾತ್ರ ಪ್ರತಿಯೊಬ್ಬರ ಜೀವನದಲ್ಲೂ ಶತಸಿದ್ಧ. ಕೊನೆಯ ಪುಟದಲ್ಲಿ ದಪ್ಪ ಅಕ್ಷರದಲ್ಲಿ ಕಾಯುವಿಕೆಯನ್ನು ತಾಳಿಕೊಂಡವರು ಮತ್ತು ಸದಾ ಪ್ರಯತ್ನಿಶೀಲರಾಗಿರುವವರಿಗೆ ಮಾತ್ರ ಮನಸ್ಸಿನೊಳಗಿನ ಕಾಯುವಿಕೆಗೆ ಉತ್ತರ ಖಂಡಿತ ಸಿಗುತ್ತದೆ ಅಂತ ಬರೆದು ಷರ ಹಾಕಿದ್ದಾನೆ. ಕಾಯುವುದು ನಮ್ಮ ಜವಾಬ್ದಾರಿ ಅಲ್ವೇನು…?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ