ಸ್ಟೇಟಸ್ ಕತೆಗಳು (ಭಾಗ ೬೯೭) - ಬದುಕು

ಸ್ಟೇಟಸ್ ಕತೆಗಳು (ಭಾಗ ೬೯೭) - ಬದುಕು

ಬದುಕು ಭಯವಾಗ್ತಾ ಇದೆ. ಅದೆಷ್ಟು ಅಂತ ಹೋರಾಟ. ಹೋರಾಟಕ್ಕೊಂದು ಕೊನೆ ಅನ್ನೋದೆ ಸಿಕ್ತಾ ಇಲ್ಲ ಹೀಗಂತ ಯೋಚನೆ ಮಾಡ್ತಾ ಇದ್ದವನಿಗೆ ದಾರಿ ಬದಿಯ ಅಂಗಡಿಯಲ್ಲಿ 20 ರುಪಾಯಿಗೆ ಏನನ್ನಾದರೂ ತಿನ್ನಲೇಬೇಕು ಅಂತ ನಿಂತಿದ್ದಾಗ ಅಲ್ಲಿ ಒಂದಷ್ಟು ಮುಖಗಳನ್ನು ಕಂಡೆ. ಆ ಎಲ್ಲಾ ಮುಖಗಳು ಬದುಕಿನ ಬೇರೆ ಬೇರೆ ಕಥೆಗಳನ್ನ ಹೇಳ್ತಾ ಇದ್ದವು, ಕೆಲವರಿಗೆ ವರ್ಷ 60-70 ದಾಟಿದ್ರು ಇನ್ನೂ ದೈನಂದಿನ ಕೂಲಿ ಕೆಲಸವನ್ನು ಮಾಡಲೇಬೇಕು, ಹತ್ತು ರೂಪಾಯಿ ಊಟವನ್ನು ಇಬ್ಬರು ಹಂಚಿಕೊಂಡು ತಿನ್ನಬೇಕು, ಇನ್ನು ಕೆಲವರು ಬರೀ ನೀರು ಕುಡಿದೇ ಹೊಟ್ಟೆ ತುಂಬಿಸಿಕೊಳ್ಳಬೇಕು,  ವರ್ಷಕ್ಕೊಂದು ಬಾರಿ ಊರಿಗೆ ಹೋಗೋ ಪರಿಸ್ಥಿತಿ ಕೆಲವರದು, ಬುಟ್ಟಿ ಅದರಲ್ಲಿ ಜೋಳ ಇಟ್ಟು ಬೆಳಗಿನಿಂದ ಸಂಜೆವರೆಗೆ ಕಾಯುವವರು ಒಂದು ಕಡೆ, ಈ ದಿನವಾದರೂ ಕೂಲಿ ಕೆಲಸಕ್ಕೆ ಯಾರಾದರೂ ಕರೀತಾರೆ ಅಂತ ಸಣ್ಣ ಚೀಲ ಹಿಡಿದುಕೊಂಡು ಆ ಮರದ ಕೆಳಗೆ ಕುಳಿತುಕೊಳ್ಳುವವರು ಒಂದು ಕಡೆ, ಇವರೆಲ್ಲರ ಬದುಕುಗಳನ್ನು ನೋಡಿದಾಗ ನಾನೊಂದಷ್ಟು ನೆಮ್ಮದಿಯಾಗಿದ್ದೇನೆ. ಅವರಿಗೆ ಬದುಕಿನ ಬಗ್ಗೆ ಭಯ ಇಲ್ಲ ಆದರೆ ನೆಮ್ಮದಿಗಾಗಿ ಅವರು ಅರಸ್ತಾ ಇದ್ದಾರೆ. ನಿನ್ನೆಗಿಂತ ನಾಳೆ ಚೆನ್ನಾಗಿರಲಿ ಅನ್ನೋದಷ್ಟೇ ಅವರು ಯೋಚನೆ. ಅವರವರ ಬದುಕು ಅವರವರದ್ದು. ಆದರೆ ಬದುಕು ಯಾವತ್ತೂ ಭಯಪಡಿಸಬಾರದು. ಆಗಾಗ ನೆಮ್ಮದಿ ಪ್ರೀತಿ ಎಲ್ಲಾ ಸಿಕ್ತಾ ಹೋಗಬೇಕು. ಹಾಗಾದಾಗ ಮಾತ್ರ ಬದುಕಿಗೂ ಅರ್ಥ ಬದುಕುತ್ತಾ ಇರುವವರಿಗೂ ಅರ್ಥ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ