ಸ್ಟೇಟಸ್ ಕತೆಗಳು (ಭಾಗ ೬೯೮) - ಬಂಧನ

ಸ್ಟೇಟಸ್ ಕತೆಗಳು (ಭಾಗ ೬೯೮) - ಬಂಧನ

ಹಾಗೆಯೇ ನಡೆದು ಬಂದ ಅಜ್ಜ ತಾನು ಚಹಾ ಕುಡಿಯುವಾಗ ತನಗಿಂದೇ ಖರೀದಿಸಿದ ಒಂದು ಪಾಕೆಟ್ ಬಿಸ್ಕೆಟ್ ಅನ್ನು ಹಿಡಿದು ಅಂಗಡಿಯ ಪಕ್ಕದ ಕಲ್ಲು ಬೆಂಚಿನ ಮೇಲೆ ಕುಳಿತು ಚಹಾ ಹೀರಲು ಆರಂಭಿಸಿದರು. ಅಲ್ಲೇ ಓಡಾಡುತ್ತಿದ್ದ ನಾಯಿ ಅವರ ಬಳಿಗೆ ಬಂದು ನಿಂತಾಗ ಅದಕ್ಕೂ ಒಂದೆರಡು ಬಿಸ್ಕೆಟ್ ಹಾಕಿ ಚಹಾ ಕುಡಿದರು. ದಿನಗಳು ಮುಂದುವರಿಯುತ್ತಿತ್ತು . ಅಜ್ಜನಿಗೆ ನಾಯಿಗೆ ಬಿಸ್ಕೆಟ್  ಹಾಕದಿದ್ದರೆ ದಿನ ಪೂರ್ತಿ ಆಗುವುದಿಲ್ಲ. ಆ ದಿನ ಅಜ್ಜ  ಬರುವುದು ಸ್ವಲ್ಪ ತಡವಾಗಿ ನಾಯಿಗೆ ಇನ್ಯಾರೋ ಬಿಸ್ಕೆಟ್ ಹಾಕಿದರೂ ನಾಯಿ ಅದನ್ನು ಹೊಟ್ಟೆ ತುಂಬ ತಿಂದ ಕಾರಣ ಬದಿಗೆ ನಿಂತುಬಿಟ್ಟಿತು. ಆ ದಿನ ಅಜ್ಜನಿಗೆ ಬೇಸರ ಆ ದಿನದ ದಿನಚರಿ ಸರಿಯಾಗಿ ಮುಂದುವರಿಲಿಲ್ಲ ಎಂದು. ನಾಯಿಗೂ ಅಜ್ಜನ ನೋವು ಅರ್ಥವಾಯಿತೆ? ಅಂದಿನಿಂದ ಅಜ್ಜ ಕೊಡುವುದನ್ನು ತಿಂದ ನಂತರ ಉಳಿದ ಕೆಲಸ. ಅಲ್ಲಿಯವರೆಗೂ ಅಜ್ಜನಿಗೆ ಕಾಯುವುದು. ಅವರಿಬ್ಬರ ಬಾಂಧವ್ಯ ಹಾಗೆ ಮುಂದುವರೆಯಿತು. ಆ ದಿನ ಅಜ್ಜನಿಗೆ ಆರೋಗ್ಯ ಕೆಟ್ಟು ಅಂಗಡಿಯ ಕಡೆಗೆ ಬರುವುದಕ್ಕೆ ಆಗಲಿಲ್ಲ ನಾಯಿ ಬೆಳಗಿನಿಂದ ಸಂಜೆವರೆಗೂ ಅಜ್ಜನ ದಾರಿಯನ್ನೇ ಕಾಯ್ತಾ ಇತ್ತು ದಿನಗಳೆರಡು ಕಳೆದರೂ ನಾಯಿ ಏನನ್ನು ತಿನ್ನುತ್ತಿಲ್ಲ. ಯಾರು ಹಾಕಿದ್ದನ್ನು ಮುಟ್ಟಲಿಲ್ಲ. ಮಾರನೇ ದಿನ ಅಜ್ಜ ಬಂದಾಗ ನಾಯಿ ಸುಸ್ತಾಗಿತ್ತು. ಆ ದಿನ  ಅಜ್ಜನನ್ನು ನೋಡಿ ನಾಯಿಗೆ ಜೀವ ಬಂತು. ಅಜ್ಜ ಕೊಟ್ಟ 8 ರಿಂದ 10 ಪ್ಯಾಕೆಟ್ ಬಿಸ್ಕೆಟ್ ಗಳನ್ನು ಎಲ್ಲವನ್ನ ತಿಂದು ಅಜ್ಜನ ಕಾಲ ಬಳಿ ಕುಳಿತುಕೊಂಡುಬಿಟ್ಟಿತು. ಅಜ್ಜನ ಕಣ್ಣಲ್ಲಿ ಕಣ್ಣೀರು ಆ ದಿನದಿಂದ ಅಜ್ಜ ನಾಯಿಗೆ ಯಾರು ಹಾಕಿದ್ರು ಅದನ್ನ ತಿನ್ನುವ ಅಭ್ಯಾಸವನ್ನು ರೂಡಿಸಿ ಬಿಟ್ಟರು. ಯಾಕೆಂದರೆ ತಮ್ಮ ಜೀವದ ಮೇಲೆ ತಮಗೆ ನಂಬಿಕೆ ಇಲ್ಲ. ಪ್ರತಿಯೊಬ್ಬರೂ ಈ ಬಾಂಧವ್ಯವನ್ನು ನೋಡುವುದಕ್ಕೆ ಅಂಗಡಿಗೆ ಚಹಾ ಕುಡಿಯುವುದಕ್ಕೆ ಬರ್ತಾರೆ. ದಿನ ಮುಂದುವರಿತಾ ಇದೆ. ನಾಯಿ ಅಜ್ಜನಿಗೆ ಕಾಯುತ್ತದೆ ಅಜ್ಜ ನಾಯಿಗೆ ಕಾಯ್ತಾರೆ…!

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ