ಸ್ಟೇಟಸ್ ಕತೆಗಳು (ಭಾಗ ೬೯೯) - ಬಿಂದು

ಸ್ಟೇಟಸ್ ಕತೆಗಳು (ಭಾಗ ೬೯೯) - ಬಿಂದು

ಹಾಗೆಯೇ ಬಿಂದುಗಳನ್ನು ಜೋಡಿಸಿಕೊಂಡಾಗ ಅದೊಂದು ಸಂಬಂಧದ ಚಿತ್ರವನ್ನು ಮೂಡಿಸುತ್ತದೆ. ಬಿಂದುಗಳನ್ನು ಜೋಡಿಸುವ ಕೆಲಸ ನಮ್ಮದು. ನಾವು ಜೋಡಿಸುವಾಗ ಯೋಚಿಸಿ ಚಿಂತಿಸಿ ಜೋಡಿಸುತ್ತಾ ಹೋದಹಾಗೆ ಎಲ್ಲೋ ಒಂದು ಕಡೆ ಆ ಬಿಂದುಗಳು ನಮ್ಮ ಬಾಂಧವ್ಯದ ಪರಿಧಿಯೊಳಗೆ ಬಂದು ಸೇರುತ್ತವೆ. ಕೆಲಸದ ಊರಿನಿಂದ ಪರೀಕ್ಷೆಯ ಊರಿನ ಕಡೆಗೆ ಹಾಗೆ ಚಲಿಸುತ್ತಿದ್ದಾಗ ಪಕ್ಕದ ಸೀಟಿನಲ್ಲಿ ಕುಳಿತಿದ್ದವರು ಯಾರು ಅನ್ನೋದೇ ಗೊತ್ತಿರಲಿಲ್ಲ. ಮಾತುಕತೆ ಆರಂಭವಾಯಿತು. ವಿದ್ಯಾಭ್ಯಾಸ ಮುಗಿಸಿ ವೃತ್ತಿಪರ ಶಿಕ್ಷಣದ ಕಡೆಗೆ ತೆರಳುತ್ತಿದ್ದವರು. ಅವರ ಪರಿಚಯ ಮಾಡಿಕೊಂಡು ಬಾಂಧವ್ಯಗಳ ಬಲೆ ಬೀಸಿದೆ. ಎಲ್ಲೋ ಒಂದು ಕಡೆ ನಾನು ಪಾಠ ಕಲಿಸಿದ ವಿದ್ಯಾರ್ಥಿಯ ಸ್ನೇಹಿತ ಇವನು ಅನ್ನೋದು ಮೊದಲ ಬಾಂಧವ್ಯದ ಕೊಂಡಿ. ಆ ಕೊಂಡಿಗಳನ್ನು ಇನ್ನಷ್ಟು ಬಲಪಡಿಸುತ್ತಾ ಇನ್ನೊಂದು ದೊಡ್ಡ ಬಲ ಬೀಸುವುದಕ್ಕೆ ಆರಂಭ ಮಾಡಿದೆ. ಆ ಬಲೆ ನಾನು ಅವನ ತಂಗಿಗೆ ಪಾಠ ಮಾಡಿದೆ ಅನ್ನೋದು ಇನ್ನಷ್ಟು ಗಟ್ಟಿಯಾದ ಬಾಂಧವ್ಯವನ್ನು ಹಿಡಿದುಕೊಂಡು ಬಿಟ್ಟಿತ್ತು. ಆ ಸೀಟಿನಲ್ಲಿ ಕುಳಿತುಕೊಳ್ಳುವವರೆಗೂ ಅಪರಿಚಿತರಾಗಿದ್ದ ನಾವು ಮಾತುಕತೆಯನ್ನು ಮುಂದುವರಿಸುತ್ತಾ ನನ್ನ ನಿಲ್ದಾಣ ತಲುಪುವಾಗ ಆತ್ಮೀಯರಾಗಿದ್ದರು. ಆತನಿಗೆ  ಶುಭಾಶಯ ತಿಳಿಸಿ ಪ್ರೀತಿಯಿಂದ ಬಸ್ಸನ್ನಿಳಿದೆ. ಹಾಗೆ ದಾರಿಯಲ್ಲಿ  ಬರ್ತಾ ಇರುವಾಗ ಮತ್ತೊಂದು ಸಲ ಪಯಣದ ಆರಂಭದ ಕಡೆಗೆ ಮನಸ್ಸು ಹೋಗುತ್ತೆ ನಾವು ಜೋಡಿಸಬೇಕಾಗಿರುವುದು ಬಿಂದುಗಳನ್ನು ಮಾತ್ರ ಪ್ರತಿಯೊಂದು ಬಿಂದುಗಳು ಎಲ್ಲೋ ಒಂದು ಕಡೆ ನಮ್ಮನ್ನು ಸೇರಿಕೊಳ್ಳುತ್ತವೆ. ಮನಸ್ಸು ನಮ್ಮದಿರಬೇಕು ಜೋಡಿಸುವ ಕೆಲಸ ಭಗವಂತನದ್ದು...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ