ಸ್ಟೇಟಸ್ ಕತೆಗಳು (ಭಾಗ ೬೯) - ತಲುಪದ ಸಂದೇಶ

ಸ್ಟೇಟಸ್ ಕತೆಗಳು (ಭಾಗ ೬೯) - ತಲುಪದ ಸಂದೇಶ

ಇವರು ನಮ್ಮವರಲ್ಲ ? ಅಂದರೆ ಈ ಊರಿನವರಲ್ಲ ಅಂತ ಅವರ ಭಾಷೆ ಮತ್ತು ಚಟುವಟಿಕೆಯಿಂದ ನನಗರ್ಥವಾಯಿತು. ಬಿಸಿಲ ನಾಡಿನಲ್ಲಿ ಸುಟ್ಟವರೆಂದು ಅವರ ಚರ್ಮ ತಿಳಿಸುತ್ತಿದೆ. ಸೂರ್ಯ ಕೆಲಸ ಮುಗಿಸಿ ಕೈ ಕಾಲು ತೊಳೆಯುವ ಸಮಯ ದೊಡ್ಡ ಲಾರಿಯಿಂದ ಇಳಿದರು. ನಾಲ್ಕು ಗೂಟ ಹಾಕಿ ಪ್ಲಾಸ್ಟಿಕ್ ಜೋಪಡಿ ಕಟ್ಟಿದರು. ಅಲ್ಲಲ್ಲಿ ಸಣ್ಣ ಪೊದೆ ಹಾಗೆ. ಮಣ್ಣಿನಿಂದ ಅಭಿಷೇಕ ಗೊಂಡಿರುವ ಮಕ್ಕಳು ಗುಡಿಸುತ್ತಿದ್ದಾರೆ .

ಕೆಲವರು ದೊಡ್ಡ ಲಾರಿಯಿಂದ ಸರಂಜಾಮು ಇಳಿಸುತ್ತಿದ್ದಾರೆ. ಹೆಂಗಸರಿಗೆ ಅಡಿಗೆ ತಯಾರಿಗೆ ಸಮಯ ಕಡಿಮೆ ಇದಿಯೋ ಏನೋ ಅವಸರದಲ್ಲಿ ಕೆಲಸವಾಗ್ತಿದೆ. ಇವರ ಕುಟುಂಬವೇ ಕೆಲಸವನ್ನರಸಿ ಹೊರಡುತ್ತದೆ. ಆಧಾರ್ ಕಾರ್ಡ್ ವಿಳಾಸವನ್ನ ಅಚ್ಚೊತ್ತಿದೆ. ಆದರೆ ಆ  ವಿಳಾಸದಲ್ಲಿ ಇವರು ನಿಂತದ್ದೇ ಕಡಿಮೆ. ಅದ್ಯಾವುದೋ ಬಣ್ಣದ ಪೈಪನ್ನು ಭೂಮಿಯೊಳಗೆ ಹಾಕಿ ಮಣ್ಣು ಮುಚ್ಚುತ್ತಾರೆ. ಅದು ಸಂದೇಶವಾಹಕವಂತೆ. ಇವರು ತೋಡಿದ ಗುಂಡಿ ಒಳಗಿಂದ ಸಂದೇಶ ರವಾನೆಯಾಗುತ್ತದೆ. ಇವರಿಗಾದ ಭಯ, ನೋವು ಸಾವು, ಸಂಭ್ರಮ ಯಾರಿಗೂ ತಲುಪುತ್ತಿಲ್ಲ. ಪೈಪ್‌ ಹಾಳಾಗಿದಿಯೋ ಅಂತ ಕಾಣುತ್ತದೆ…

-ಧೀರಜ್ ಬೆಳ್ಳಾರೆ 

ಚಿತ್ರ ಕೃಪೆ: ಇಂಟರ್ನೆಟ್ ತಾಣ