ಸ್ಟೇಟಸ್ ಕತೆಗಳು (ಭಾಗ ೭೦೧) - ಚಲನೆ

ಬದುಕಿನ ಈ ಜಾತ್ರೆಯಲ್ಲಿ ಎಲ್ಲವೂ ಮಾರಾಟವಾಗಲೇ ಬೇಕು. ಆ ರೈಲು ತುಂಬಾ ದೂರದವರೆಗೆ ಪಯಣ ಮಾಡುತ್ತೆ. ಅವರ ಜೀವನ ಆ ಗಾಡಿಯನ್ನು ಅವಲಂಬಿಸಿದೆ. ಕೆಲವರು ವಿವಿಧ ರೀತಿಯ ತಿಂಡಿ ತಿನಸು ಜ್ಯೂಸ್ ಇತ್ಯಾದಿಗಳನ್ನು ಹೊತ್ತುಕೊಂಡು ರೈಲನ್ನೇರುತ್ತಾರೆ. ಕೆಲವರು ಆಟಿಕೆಗಳು, ಪ್ರೀತಿಯ ಪುಸ್ತಕಗಳು, ಮಕ್ಕಳ ಆಡುವ ವಸ್ತುಗಳನ್ನು ಹೊತ್ತು ಅದೇ ರೈಲನ್ನು ಅವಲಂಬಿಸಿದ್ದಾರೆ. ಎಲ್ಲರೂ ಖರೀದಿಸಲೇಬೇಕು ಆ ದಿನದ ಮಾರಾಟದ ಮೇಲೆ ಆ ದಿನದ ಜೀವನ ಅವಲಂಬಿಸಿದೆ. ಅದಕ್ಕೋಸ್ಕರ ಅವರ ಆಡುವ ಮಾತುಗಳು ಸಂಭಾಷಣೆಗಳು ಜಗಳಗಳು ಎಲ್ಲವೂ ಅವರ ಬದುಕಿನ ವಿಚಾರಗಳು. ಆ ಕ್ಷಣಕ್ಕೆ ಅವರ ಬದುಕನ್ನು ಅವಲಂಬಿಸಿ ನಿರ್ಧರಿತವಾಗಿರೋದು. ಸಂಭ್ರಮದ ಜಾತ್ರೆ ಇನ್ನು ಕೆಲವರು ನೋವಿನ ಯಾತ್ರೆ, ಚಿಲ್ಲರೆಗಳನ್ನೇ ಸೇರಿಸಿಕೊಂಡು ಗಟ್ಟಿಯ ಬದುಕನ್ನು ಸಾಧಿಸಲೇಬೇಕು, ಕೆಲವೊಮ್ಮೆ ತಿರಸ್ಕಾರಗಳು ಇನ್ನೊಮ್ಮೆ ಪುರಸ್ಕಾರಗಳು ಎಲ್ಲವೂ ಜೀವನದಲ್ಲಿ ಅನುಭವಿಸಿದಂತೆ ಸಾಗಿದ್ದಾರೆ. ಅವರದ್ದು ಊರಿನಿಂದ ಊರಿಗೆ ನಿಲ್ಲದ ಪಯಣ. ಜನರ ನಡುವೆ ಸಾಗುತ್ತಾ ಅವರ ಬದುಕಿನಲ್ಲಿ ಒಂದಷ್ಟು ಬದಲಾವಣೆಗಳನ್ನು ತಂದು ತಮ್ಮ ಬದುಕು ಹಸನಾಗುವಂತೆ ದೇವರಲ್ಲಿ ದಿನನಿತ್ಯ ಬೇಡುತ್ತಾರೆ. ಹಳಿಗಳ ಮೇಲೆ ಚಲಿಸುವ ರೈಲೇ ಇವರ ಬದುಕು. ಹಳಿಗಳು ನಿಂತಿದ್ದರೂ ರೈಲು ಚಲಿಸುತ್ತಿದೆ. ಬದುಕು ನಿಂತಿದೆ ಕಾಲ ಚಲಿಸುತ್ತಿದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ