ಸ್ಟೇಟಸ್ ಕತೆಗಳು (ಭಾಗ ೭೦೩) - ಚಂದಿರ

ಚಂದಿರನ ಅರಮನೆಯಲ್ಲಿ ಚರ್ಚೆ ಜೋರಾಗಿತ್ತು. ಕೆಲವರ ವಾದ "ತಮ್ಮ ನೆಲದ ಮೇಲೆ ಯಾರೋ ಕಾಲಿಟ್ಟಿದ್ದಾರಂತೆ, ನಮ್ಮ ಮಾಹಿತಿಯನ್ನ ಬೇರೆ ಊರಿಗೆ ಸಾಗಿಸ್ತಾರಂತೆ, ಹೌದೌದು, ಇದು ತುಂಬಾ ನಾಚಿಕೆಯ ವಿಷಯ ನಾವು ಇದರ ಬಗ್ಗೆ ಹೋರಾಟ ಮಾಡಲೇಬೇಕು." ಹೀಗಂತ ಮಾತುಕತೆ ಮುಂದುವರಿಯಿತು. ಇವರೆಲ್ಲರ ಚರ್ಚೆಗಳನ್ನು ಕೇಳುತ್ತಿದ್ದ ಚಂದಿರ ಹೇಳಿದ ನೋಡಿ ನಮ್ಮ ವಿಚಾರ ಇನ್ನೊಬ್ಬರಿಗೆ ಅರ್ಥವಾಗುತ್ತಾ ಹೋದರೆ, ನಾವು ಏನು ಅನ್ನೋದು ಅವರಿಗೆ ತಿಳಿದರೆ ಅದು ನಮಗೆ ಒಳ್ಳೆಯದು. ನಮ್ಮ ನೆಲದ ನಮ್ಮ ಸತ್ವಗಳನ್ನ ಅವರು ತಿಳಿದುಕೊಂಡು ಅರ್ಥೈಸಿಕೊಂಡು ನಾವು ಇನ್ನೂ ವಿಶೇಷವಾಗಿ ಹೊಸದಾಗಿ ಅಭಿವೃದ್ಧಿಯಾಗುವುದು ಹೇಗೆ ಎಂಬುದನ್ನು ಅವರ ಚಿಂತಿಸ್ತಾರೆ. ಇಷ್ಟರವರೆಗೂ ಭೂಮಿಯ ಮೇಲೆ ಕುಳಿತುಕೊಂಡು ಅಲ್ಲಿ ನೋಡು ಚಂದಮಾಮ ಎಷ್ಟು ಚೆನ್ನಾಗಿದ್ದಾನೆ ಹುಣ್ಣಿಮೆ ಅಮಾವಾಸ್ಯೆಗಳು ಅನ್ನೋದನ್ನು ಮಾತನಾಡುತ್ತಿದ್ದಾರೆ ವಿನಃ ನಮ್ಮ ನೆಲದ ನಿಜವಾದ ವಿಚಾರಗಳನ್ನು ಅವರು ಅರ್ಥ ಮಾಡಿಕೊಂಡಿಲ್ಲ. ಹಾಗಾಗಿ ಬಂದಿದ್ದಾರೆ ಅರ್ಥ ಮಾಡಿಕೊಳ್ಳಲಿ, ನಾವು ಅವರು ಸೇರಿ ಹೊಸತೇನಾದರೂ ಮಾಡುವುದಕ್ಕೆ ಸಾಧ್ಯ ಆದರೆ ಅದನ್ನ ಪ್ರಯತ್ನ ಪಡೋಣ. ಇವರು ಅಂತಲ್ಲ ಇದಕ್ಕಿಂತ ಮುಂಚೆ ಒಂದಷ್ಟು ಜನ ಪ್ರಯತ್ನಪಟ್ಟಿದ್ದಾರೆ, ಕೆಲವರು ಹತ್ತಿರ ಬಂದು ಸೋತು ಹೋಗಿದ್ದಾರೆ ಕೆಲವರು ನಮ್ಮ ನೆಲವನ್ನು ಸ್ಪರ್ಶಿಸುವುದಕ್ಕೂ ಅರ್ಹತೆ ಕಳೆದುಕೊಂಡಿದ್ದಾರೆ. ಹಾಗಾಗಿ ಅವರು ಕಷ್ಟ ಪಟ್ಟ ಕಾರಣ ನಮ್ಮ ನೆಲವನ್ನು ತಲುಪಿದ್ದಾರೆ ಮುಂದೆ ನಮ್ಮಿಬ್ಬರ ಸೇರುವಿಕೆಯಿಂದ ಹೊಸತೇನಾದರೂ ಈ ನೆಲದಲ್ಲಿ ಸಾಧ್ಯವಾಗುವುದಿದ್ದರೆ ಅದು ಕೂಡ ಆದಷ್ಟು ಬೇಗ ಆಗಲಿ. ಯಾವತ್ತೂ ನಮ್ಮನ್ನ ನಾವು ತೆರೆದುಕೊಳ್ಳಬೇಕು ಹೊಸ ವಿಚಾರಕ್ಕೆ ತೊಡಗಿಸಿಕೊಳ್ಳಬೇಕು ಅದ್ಭುತವಾದದ್ದು ಆಗ ಸಾಧ್ಯವಾಗುತ್ತದೆ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ