ಸ್ಟೇಟಸ್ ಕತೆಗಳು (ಭಾಗ ೭೦೬) - ನೆನಪು

ಸ್ಟೇಟಸ್ ಕತೆಗಳು (ಭಾಗ ೭೦೬) - ನೆನಪು

ನೆನಪುಗಳು ಹಾಗೆ ಕಾದು ಕೂತಿದ್ದವು ಮನಸ್ಸಿನೊಳಗೆ ಅದಕ್ಕೆ ಒಂದಿಷ್ಟು ಚೈತನ್ಯ ಬೇಕಿತ್ತು. ಮತ್ತೊಂದಷ್ಟು ಸ್ಪೂರ್ತಿ ಬೇಕು. ಅದಕ್ಕೆ ಒಂದಷ್ಟು ಅವಕಾಶಗಳಿಗಾಗಿ ಅದು ಕಾಯುತ್ತಿತ್ತು. ದೊಡ್ಡ ಶಹರದ ಪುಟ್ಟ ಕೋಣೆ ಒಳಗಡೆ ನೆನಪುಗಳನ್ನ ಸೃಷ್ಟಿಸಿದವರು ನೆನಪುಗಳಲ್ಲಿ ಬದುಕಿದ್ದವರು ಮಾತುಕತೆಯನ್ನಾಡಲು ಆರಂಭಿಸಿದರು. ಆ ಮಾತುಗಳಲ್ಲಿ ಕಳೆದೆಲ್ಲ ಕ್ಷಣಗಳು, ರಸ ನಿಮಿಷಗಳು, ಅಂತೆಕಂತೆಗಳೆಲ್ಲಾ ಬಿಕರಿಯಾದವು. ಈ ಭೇಟಿಯನ್ನು ಕೆಲವೇ ಕ್ಷಣಗಳಲ್ಲಿ ತ್ಯಜಿಸಿ ಹೊರಡಬೇಕೆನ್ನುವ ನಿರ್ಧಾರ ಮನಸಿಗೊಂತರ ಕಸಿವಿಸಿ. ಬದುಕಿನ ದಾರಿ ನೋಡಿಕೊಳ್ಳಲೇಬೇಕು. ಮತ್ತೊಂದು ಸಲದ ಭೇಟಿಗಾಗಿ ಕಾಯಬೇಕು. ನಡೆದ ದಾರಿಗಳು ನೆನಪಿದ್ದವು, ಹೆಜ್ಜೆಗಳು ಬರುವ ದಾರಿಯನ್ನು ನೆನಪಿಸಿದ್ದವು. ಒಟ್ಟಿನಲ್ಲಿ ನೆನಪುಗಳು ನೆನಪಿನ ದಾರಿಯನ್ನ ಮತ್ತೆ ನೆನಪುಗಳನ್ನ ಮುಂದೆ ನೆನಪಾಗಿ ಇಡುವ ಹಾಗೆ ನೆನಪಿನಲ್ಲಿ ಉಳಿಯುವ ಹಾಗೆ ನಾನಿದ್ದೇನೆ ಎನ್ನುವ ಕಾರಣಕ್ಕೆ ಮತ್ತೆ ಮತ್ತೆ ಅದನ್ನು ಎದೆಯ ಗೂಡಿನೊಳಗೆ ಪಿಸುಮಾತಿನಲಿ ನೆನಪಿಸುತ್ತಿತ್ತು. ಶಹರದಿಂದ ಊರಿನ ಕಡೆಗೆ ರೈಲು ಓಡುತ್ತಿತ್ತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ