ಸ್ಟೇಟಸ್ ಕತೆಗಳು (ಭಾಗ ೭೦೭) - ಕೂಗು

ಸ್ಟೇಟಸ್ ಕತೆಗಳು (ಭಾಗ ೭೦೭) - ಕೂಗು

ಬಿಸಿಲು ತುಂಬಾ ಜೋರಾಗಿದೆ. ಕಣ್ಣುಗಳನ್ನ ಸರಿಯಾಗಿ ತೆರೆಯುವುದಕ್ಕೆ ಆಗುತ್ತಿಲ್ಲ. ಬೆವರು ಹಾಗೆ ಇಳಿದು ಹೋಗುತ್ತಿದೆ. ನೆರಳಲ್ಲಿ ನಿಂತರೆ ಯಾವುದೇ ಸೀಬೆಹಣ್ಣು ಮಾರಾಟವಾಗುವುದಿಲ್ಲ ಅನ್ನೋದು ಆಕೆಗೆ ಗೊತ್ತಿದೆ. ತನ್ನ ಮಗು ತುಂಬಾ ಹಸಿವೆಯಾದಾಗ ಅದರಲ್ಲಿ ಹೆಚ್ಚು ಹಣ್ಣಾಗಿರುವ ಹಣ್ಣನ್ನ ನೀಡುತ್ತಾಳೆ. ಪಕ್ಕದಲ್ಲಿರುವ ಮರದ ಕೊಂಬೆಯೊಂದಕ್ಕೆ ಬಟ್ಟೆಯನ್ನು ಕಟ್ಟಿ ಅದರಲ್ಲಿ ತನ್ನ ಮಗುವನ್ನ ಕೂರಿಸಿದ್ದಾಳೆ. ಮಗುವಿಗೆ ಈ ಜಗತ್ತಿನ ಪರಿಚಯವಾಗುತ್ತಿಲ್ಲ. ಜನ ಯಾಕೆ ದೂರದಿಂದಲೇ ಹೋಗ್ತಾ ಇದ್ದಾರೆ, ದೊಡ್ಡ ದೊಡ್ಡ ಅಂಗಡಿಗಳಲ್ಲಿ ಏನೇನು ವಿಧ ವಿಧದ ವಸ್ತುಗಳನ್ನು ಇಟ್ಟು ಬಿಟ್ಟಿದ್ದಾರೆ. ಆದರೆ ಅಮ್ಮ ಮಾತ್ರ ಸೀಬೆಯನ್ನು ಬಿಸಿಲಿನಲ್ಲಿ ಮಾರಾಟ ಮಾಡುತ್ತಿದ್ದಾಳೆ ಏಕೆ? ಯಾರೂ ಹತ್ತಿರ ಬರುತ್ತಿಲ್ಲ. ಸೀಬೆ ತುಂಬಾ ಚೆನ್ನಾಗಿದೆ. ನಾನೇ ಅದನ್ನು ತುಂಬಾ ಸಲ ಇಷ್ಟಪಟ್ಟು ತಿಂದಿದ್ದೇನೆ. ಆದರೆ ಜನರಿಗೆ ಯಾಕಿದು ಬೇಡ? ಅದು ಯಾವುದೋ ಬಣ್ಣದ ತಿಂಡಿಗಳನ್ನು ದುಡ್ಡು ಕೊಟ್ಟು ಖರೀದಿಸುತ್ತಾರೆ. ಅದನ್ನೇ ತಿಂತಾರೆ ಕೂಡ. ನಾನು ಎಷ್ಟೇ ಜೋರಿನಿಂದ ಕರೆದರೂ ಯಾರೂ ಕೇಳುತ್ತಾನೇ ಇಲ್ಲ. ಬಿಸಿಲಿನಲ್ಲಿ ಸೀಬೆಹಣ್ಣು ಒಣಗಿದ ತರವೇ ಅಮ್ಮನ ಮುಖ ಬಾಡ್ತಾ ಇದೆ. ಯಾರಾದರೂ ಬಂದು ಸೀಬೆಹಣ್ಣು ಖರೀದಿಸಿ... ನಾನು ಅಮ್ಮ ಬೇಗ ಮನೆಗೆ ಹೋಗ್ತೇವೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ