ಸ್ಟೇಟಸ್ ಕತೆಗಳು (ಭಾಗ ೭೦೮) - ಡೋಲು

ಸ್ಟೇಟಸ್ ಕತೆಗಳು (ಭಾಗ ೭೦೮) - ಡೋಲು

ಹೆಚ್ಚಿನ ಹಗಲು ರಾತ್ರಿಗಳಲ್ಲಿ ರಾಘಣ್ಣ ಮನೆಯಲ್ಲಿರೋದೇ ಇಲ್ಲ. ಅವರು ಅಷ್ಟೊಂದು ದುಡಿಯಬೇಕಾ ಅಂತ ಯೋಚನೆ ಮಾಡಿದರೆ ಮನೆ ಸಾಗುವುದಿಲ್ಲ. ಆ ಮನೆಯಲ್ಲಿರೋದು ಎರಡೇ ಜನ ಗಂಡ ಹೆಂಡತಿ ಮಾತ್ರ. ಹೆಂಡತಿಗೆ ಆರೋಗ್ಯ ಹುಷಾರಿಲ್ಲ. ಮದುವೆ, ಗೃಹ ಪ್ರವೇಶ ಕಾರ್ಯಕ್ರಮಗಳಿಗೆ ಡೋಲು ಹಿಡಿದು ಹೊರಡುತ್ತಾರೆ. ಅವರ ಹೊಡೆತಗಳಿಗೆ ಕುಣಿಯದ ಮನಸ್ಸುಗಳೇ ಇಲ್ಲ. ಎಲ್ಲರೂ ಮನ ತುಂಬಿ ಕುಣಿಯುತ್ತಿರುತ್ತಾರೆ. ಇವರು ಇನ್ನೊಂದಷ್ಟು ಹೆಚ್ಚು ಖುಷಿಯಿಂದ ಡೋಲನ್ನ ಹೊಡೆದು ಬಂದವರನ್ನು ಖುಷಿ ಪಡಿಸುತ್ತಾರೆ. ನಾಲ್ಕು ಕಾಸು ಹೆಚ್ಚು ಸಿಗಲಿ ಅನ್ನೋದು ಅವರ ಆಸೆ. ಅನ್ನಕ್ಕೆ ನೆಂಚಿಕೊಳ್ಳಲು ಏನಾದರೂ ಕೊಳ್ಳಬಹುದೆಂಬ ಆಸೆ. ಅವರಿಗೂ ಕನಸುಗಳಿವೆ. ಅವರ ಮಗನ ಮದುವೆಗೂ ಹೀಗೆ ಖುಷಿಯಿಂದ ಡೋಲು ಬಾರಿಸುವ ಆಸೆ. ಅವನು ಬದುಕಿದ್ದರೆ ಮಗನ ಮದುವೆ ತುಂಬಾ ಖುಷಿಯಿಂದ ಎಲ್ಲರೂ ಸಮ್ಮುಖದಲ್ಲಿ ಸಂಭ್ರಮದಿಂದ ನಡಿತಾ ಇತ್ತು. ಆ ದಿನದ ಒಂದು ಅಪಘಾತ ಸಂಭವಿಸದೆ ಹೋಗಿದ್ರೆ ಅವನು ಮದುಮಗನಾಗಿ ನಮ್ಮಿಬ್ಬರನ್ನು ಚೆನ್ನಾಗಿ ನೋಡಿ ಕೊಳ್ತಾ ಇದ್ದ. ಅವರು ಡೋಲು ಬಾರಿಸುವುದು ನೋವಿನಿಂದ ಖುಷಿಯಿಂದ ಮನೆಯ ಮಡದಿಯ ಕಣ್ಣೀರು ಒರಸಬೇಕಾದ ಜವಾಬ್ದಾರಿಯಿಂದ... ಡೋಲಿನ ಶಬ್ದದ್ದಲ್ಲಿ ಅವರ ನೋವಿನ ಕೂಗು ಕೇಳುತ್ತಿಲ್ಲ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ