ಸ್ಟೇಟಸ್ ಕತೆಗಳು (ಭಾಗ ೭೦೯) - ಕತ್ತಲೆಯ ಮುಖ
ಆ ಸ್ಥಳದಲ್ಲಿ ಸಂಜೆ ಬದುಕು ತೆರೆದುಕೊಳ್ಳುವುದು. ಸಂಜೆ ಸೂರ್ಯ ಮನೆಗೆ ತೆರಳಿ ಚಾಪೆ ಹಾಸಿ ಮಲಗುವ ಸಮಯದಲ್ಲಿ ಬಾನಿಗೊಂದಿಷ್ಟು ಕೆಂಪಿನ ರಂಗನ್ನ ಹಾಸಿ ನಕ್ಷತ್ರಗಳ ಚಿತ್ತಾರವನ್ನು ಬಿಡಿಸಿ ಚಂದಿರನಿಗೆ ಅಧಿಕಾರ ಕೊಟ್ಟು ವಿರಮಿಸುತ್ತಾನೆ. ಆಗ ಆ ಬೀದಿಯ ಸಣ್ಣ ಸಣ್ಣ ಅಂಗಡಿಗಳು ಸಣ್ಣ ದೀಪಗಳ ಅಡಿಯಲ್ಲಿ ಬದುಕನ್ನ ಕಟ್ಟಿಕೊಳ್ಳುವುದಕ್ಕೆ ಆರಂಭ ಮಾಡುತ್ತದೆ. ಅಲ್ಲಲ್ಲಿ ಹೊಗೆಯಾಡುತ್ತಿರುವ ತಿಂಡಿಗಳು ದೂರದಲ್ಲಿ, ಘಮಘಮಿಸುತ್ತಿರುವ ವಿವಿಧ ರೀತಿಯ ಭೋಜನಗಳು ತರಕಾರಿಗಳು ಹಣ್ಣು ಹಂಪಲುಗಳು ಶಬ್ದ ಮಾಡುತ್ತಿರುವ ಚರುಮುರಿ ತಟ್ಟೆಗಳು ಚಹಾದ ಲೋಟಗಳು ಎಲ್ಲವೂ ಆ ರಾತ್ರಿಯ ಹೊತ್ತಲ್ಲಿ ಅಲ್ಲಿ ತಿರುಗಾಡುತ್ತವೆ. ಬೆಳಗಿನ ಹೊತ್ತು ಅದನ್ನ ಕೇಳುವವರಿಲ್ಲ. ಮತ್ತೆ ಆ ಪ್ರದೇಶದಲ್ಲಿ ಬೆಳಗಿನ ಹೊತ್ತು ಜನರ ಓಡಾಟವೇ ಕಡಿಮೆ.ಹಾಗಾಗಿ ಅಲ್ಲಿಯವರ ಬದುಕು ರಾತ್ರಿಗಳನ್ನ ಅವಲಂಬಿಸಿದೆ. ರಾತ್ರಿ ಮಳೆಯಾದರೂ ಅವರಿಗೆ ಅವತ್ತು ನಿದ್ದೆ ಇಲ್ಲ. ಊಟವಿಲ್ಲ. ಮಳೆ ಬೀಳದೆ ಜನ ಹೆಚ್ಚಾದರೆ ಬದುಕು ಅದ್ಭುತವಾಗಿ ಸಾಗುತ್ತದೆ. ಹಾಗಾಗಿ ಸೂರ್ಯಒಂದೊಂದು ಸಲ ಈ ಜನರ ಕಷ್ಟ ನೋಡೋಕ್ಕಾಗದೆ ಬೇಗನೆ ಮನೆಗೆ ಹೋಗಿ ಮಲ್ಕೊಂಡು ಬಿಡ್ತಾನೆ. ರಾತ್ರಿ ಮಧ್ಯೆ ತಲುಪುವವರೆಗೂ ಜನರ ಓಡಾಟ ಹಾಗೆ ಇರುತ್ತದೆ. ಎಲ್ಲರ ನಿದ್ದೆಗಳನ್ನ ಹೊಡೆದೋಡಿಸಿ ನಾಳಿನ ಬದುಕನ್ನ ಹಿಂದೆ ಬೆಳಗಿಸಿ ಬಿಡುತ್ತದೆ. ಪ್ರತಿವೂರಲ್ಲೂ ರಾತ್ರಿಯ ಬೆಳಕು ಅಲ್ಲಲ್ಲಿ ಮೂಡುತ್ತಾ ಇರುತ್ತದೆ .ಒಂದು ಸಲ ರಾತ್ರಿಯ ಬೆಳಕಿನಲ್ಲಿ ಪಯಣಿಸಿದೆ ನೋಡಿದ್ರೆ ಒಂದಷ್ಟು ಕತ್ತಲೆಯ ಮುಖಗಳು ಕಾಣಸಿಗುತ್ತವೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ