ಸ್ಟೇಟಸ್ ಕತೆಗಳು (ಭಾಗ ೭೧೪) - ಆತ್ಮ

ಸ್ಟೇಟಸ್ ಕತೆಗಳು (ಭಾಗ ೭೧೪) - ಆತ್ಮ

ಹೀಗೊಂದು ಆತ್ಮವೂ ಓಡಾಡುತ್ತಿತ್ತು. ಇತ್ತೀಚಿಗೆ ತಾನೇ ದೇಹದಿಂದ ದೂರವಾಗಿ ಹೊಸತೊಂದು ದೇಹವನ್ನು ಹುಡುಕಿಕೊಂಡು ಅಂತರಿಕ್ಷದಲ್ಲಿ ಅಲೆದಾಡುತ್ತಿತ್ತು. ಅದಕ್ಕೊಂದು ದೇಹ ಬೇಕಿತ್ತು ಸ್ವಾರ್ಥವಿಲ್ಲದ ಸದಾ ಪ್ರೀತಿಯನ್ನೇ ಸ್ಫುರಿಸುವ ಎಲ್ಲರಿಗೂ ಒಳಿತನ್ನೆ ಬಯಸುವ ನಿಷ್ಕಲ್ಮಶವಾದ ಭಾವಜೀವಿಯಾದ ಎಲ್ಲಾ ಕೆಲಸಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಸದಾ ಲೋಕ ಹಿತವನ್ನೇ ಬಯಸುವ ದೇಹವೊಂದರ ಅವಶ್ಯಕತೆ ಇತ್ತು.

ಕಾಡು ಮೇಡುಗಳನ್ನ ಅಳೆದು ಊರು ಊರುಗಳನ್ನು ಸುತ್ತಿ ಎತ್ತರದ ಗುಡ್ಡ ಆಳದ ಕಂದಕ ಎಲ್ಲ ಕಡೆಯೂ ಹುಡುಕಿದರೂ ಕೂಡ ಎಲ್ಲಾ ಲಕ್ಷಣಗಳನ್ನು ಹೊಂದಿರುವ ದೇಹ ಸಿಗಲೇ ಇಲ್ಲ. ಅಲ್ಲೇ ಸಿಕ್ಕ  ಆತ್ಮವೊಂದು ಹೇಳಿತಂತೆ ನೋಡು ಮಾರಾಯ ಎಲ್ಲಾ ಗುಣಗಳನ್ನು ಹೊಂದಿರುವ ಆ ದೇಹಗಳು ಸಿಗೋದಿಲ್ಲ. ಒಬ್ಬೊಬ್ಬರಲ್ಲಿ ಒಂದೊಂದು ನ್ಯೂನ್ಯತೆಗಳು ಇದ್ದೇ ಇರುತ್ತದೆ. ಅದನ್ನ ನಾವು ಆತ್ಮಗಳು ಬದಲಾಯಿಸ್ತಾ ಹೋಗಬೇಕು. ಅದು ದೇಹದ ಕೆಲಸವಲ್ಲ ಇದು ನಮ್ಮ ಮನಸ್ಸಿನಲ್ಲಿ ಏನಿದೆಯೋ ಅದನ್ನ ದೇಹದ ಮೂಲಕ ಮಾಡಿಸೋ ಕೆಲಸ ನಮ್ಮದು .ಹಾಗಾಗಿ ಯಾವ ದೇಹವನ್ನಾದರೂ ಆಯ್ಕೆ ಮಾಡಿಕೋ ನಂತರ ಅವನನ್ನ ಸರಿಯಾದ ದಾರಿಯಲ್ಲಿ ನಿನ್ನ ಆಲೋಚನೆಯಲ್ಲಿ ಸಾಗಿಸುವ ಕೆಲಸ ನಿನ್ನದು ಅಂತ ಹೇಳಿ ಕಳುಹಿಸಿಕೊಟ್ಟಿತಂತೆ. ಆಗ ಆತ್ಮ ಹುಡುಕಿ ಹುಡುಕಿ ದೇಹವೊಂದನ್ನು ಆರಿಸಿಕೊಂಡು ಬಿಟ್ಟಿತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ