ಸ್ಟೇಟಸ್ ಕತೆಗಳು (ಭಾಗ ೭೧೫) - ಕೃಷ್ಣ

ಸ್ಟೇಟಸ್ ಕತೆಗಳು (ಭಾಗ ೭೧೫) - ಕೃಷ್ಣ

ಆ ದಾರಿಗಳು ಕೂಡುವ ಕಡೆಗೆ ಇಬ್ಬರು ಕೃಷ್ಣರು ಎದುರುಬದುರಾದರು. ಇಬ್ಬರ ವಯಸ್ಸು ಒಂದೇ ಮನೆಯಿಂದ ಅವರವರ ದಾರಿಯನ್ನ ಆಯ್ಕೆ ಮಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲದ ವಯಸ್ಸದು. ಹೆತ್ತವರು ಜೊತೆಗೆ ನಿಂತೆ ಬದುಕನ್ನು ಸಾಗಿಸಬೇಕಾದ ಅನಿವಾರ್ಯ ಪರಿಸ್ಥಿತಿಯವರದು. ಇಬ್ಬರೂ ಮುಖ ಮುಖ ನೋಡ್ಕೊಂಡರು. ಇಬ್ಬರಲ್ಲೂ ಕೃಷ್ಣನ ಕಳೆ. ಮುಖದಲ್ಲೊಂದು ತೇಜಸ್ಸು ಹೊಸದೇನು ಆಗಿ ಕಾಣುತ್ತಿದ್ದೇವೆ ಎನ್ನುವ ಖುಷಿ. ಇಬ್ಬರನ್ನು ಅವರ ತಾಯಿ ಕೈ ಹಿಡಿದು ನಡೆಸುತ್ತಿದ್ದಾರೆ. ಮೊದಲನೇ ಹುಡುಗ ಆ ದಿನದ ಶಾಲೆಯಲ್ಲಿ ಯಾವುದೋ ಸ್ಪರ್ಧೆಗೆ ತಯಾರಾಗಿದ್ದಾನೆ. ಚಂದದ ಕಿರೀಟ ಅದರ ಮೇಲೊಂದು ನವಿಲುಗರಿ ಮುಖದಲ್ಲಿ ಮುಗುಳ್ನಗೆ ಬಣ್ಣ ಬಣ್ಣದ ಬಟ್ಟೆಗಳು ಎಲ್ಲವನ್ನ ಮೈಯಲ್ಲಿ ಧರಿಸಿಕೊಂಡು ಅಮ್ಮನ ಕೈ ಹಿಡಿದು ಶಾಲೆಗೆ ತನ್ನ ಗೆಳೆಯರ ಮುಖವನ್ನು ಕಾಣಲು ಸಂಭ್ರಮದಲ್ಲಿ ಹೊರಟಿದ್ದಾನೆ. ಎದುರಿನವನ ಮುಖದಲ್ಲಿ ಕೃಷ್ಣ ಕಳೆ, ತಲೆಯಲ್ಲಿ ನವಿಲುಗರಿಯ ಜಾಗದಲ್ಲೊಂದು ಸಣ್ಣ ಎಲೆ, ದೇಹದ ಸೌಂದರ್ಯವನ್ನ ಇಮ್ಮಡಿ ಕಳಿಸುವುದಕ್ಕೆ ಅಮ್ಮನ ಹಳೆಯ ಬಟ್ಟೆ. ಕೃಷ್ಣ ಎಂದು ಒಪ್ಪಿಕೊಳ್ಳುವುದಕ್ಕೆ ಸಾಧ್ಯವಿರುವ ಧಿರಿಸುಗಳು. ಅವರ ಕೆಲಸ ಮನೆ ಮನೆಗೆ ತೆರಳಿ ಸಿಕ್ಕ ಚೂರು ದುಡ್ಡಿನಿಂದ ಎಂದಿಗಿಂತ ಈ ದಿನವನ್ನು ವಿಶೇಷವಾಗಿ ಆಚರಿಸುವುದು. ಅಮ್ಮನ ಖುಷಿಗಾಗಿ ಒಬ್ಬ ಕೃಷ್ಣನಾದರೆ,ಹೊಟ್ಟೆಯ ಹಸಿವು ತಣಿಸುವುದಕ್ಕೆ ಇನ್ನೊಬ್ಬ ಕೃಷ್ಣನಾಗ ಹೊರಟಿದ್ದಾನೆ. ಅವರವರ ಬದುಕಿನ ದಾರಿಯನ್ನ ಕೃಷ್ಣ ಆರಿಸಿ ಕಳುಹಿಸಿದ್ದಾನೆ. ಬದುಕಿನ ಅನಿವಾರ್ಯತೆಗೆ ಅನಿವಾರ್ಯತೆಯ ಬದುಕಿಗೆ ಇಬ್ಬರು ವೇಷ ಧರಿಸಿ ಹೊರಟಿದ್ದಾರೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ