ಸ್ಟೇಟಸ್ ಕತೆಗಳು (ಭಾಗ ೭೧೭) - ವೇಗ

ಕೆಲಸವೊಂದರಿಂದ ಮನೆಯ ಕಡೆಗೆ ಚಲಿಸುವ ದಾರಿಯಲ್ಲಿ ಹೊರಟಿದ್ದೆ. ಮಳೆ ಸುರಿಯೋದಕ್ಕೆ ಆರಂಭವಾಯಿತು. ಮನೆಗೆ ತಲುಪುವುದಕ್ಕೆ ಒಂದಷ್ಟು ಸಮಯ ಇತ್ತು. ಎಲ್ಲಾದರೂ ನಿಂತು ಕಾಯೋಣ ಅನ್ನೋದಕ್ಕಿಂತ ಬೇಡ ಸಣ್ಣ ಮಳೆ ಹನಿಯಲ್ಲವೇ ಒದ್ದೆಯಾಗತ್ತಾ ಮನೆ ತಲುಪುವ ಅನ್ನೋ ಕಾರಣಕ್ಕೆ ವೇಗವನ್ನು ಹೆಚ್ಚಿಸಿದೆ. ಆದರೆ ಮಳೆಯ ಹನಿಗಳ ಹೊಡೆತಕ್ಕೆ ಸರಿಯಾಗಿ ಕಣ್ಣನ್ನು ತೆಗೆಯುವುದಕ್ಕೆ ಆಗ್ತಾ ಇಲ್ಲ. ಮೈಗೆಲ್ಲ ನೀರು ಚುಚ್ಚಿದ ಹಾಗೆ ಆಗ್ತಾ ಇದೆ. ನೋವಿನಿಂದ ಗಾಡಿಯ ವೇಗವನ್ನ ತಗ್ಗಿಸಿದಾಗ ಅದು ಯಾವುದೇ ಅನುಭವ ಆಗ್ತಾ ಇಲ್ಲ. ತುಂತುರು ಮಳೆಯಲ್ಲಿ ಗಾಡಿಯನ್ನು ಚಲಾಯಿಸುವುದ್ದಕ್ಕೆ ತುಂಬಾ ಮಜವಾಗಿತ್ತು. ವೇಗ ಹೆಚ್ಚಿಸಿದಾಗ ಒಂದು ತರಹ, ವೇಗವನ್ನ ಕಡಿಮೆಗೊಳಿಸಿದಾಗ ಇನ್ನೊಂದು ತರದ ಅನುಭವ. ಒಂದೇ ಮಳೆಯ ಹನಿ ಮಳೆಯ ವೇಗದಲ್ಲಿ ಬದಲಾವಣೆಯಾಗಿಲ್ಲ. ನಾನು ಚಲಾಯಿಸುತ್ತಿದ್ದ ವಾಹನದ ವೇಗದಿಂದ ನನಗಾಗುತ್ತಿದ್ದ ಸಮಸ್ಯೆಯಲ್ಲಿ ಬದಲಾವಣೆ ಕಂಡುಬಂದಿತ್ತು. ಹಾಗೆ ಕೆಲವೊಂದು ಸಲ ಸನ್ನಿವೇಶಗಳು ಹಾಗೆ ಇರುತ್ತದೆ. ನಾವು ಆ ಸನ್ನಿವೇಶದ ಕಡೆಗೆ ಹೇಗೆ ಸಾಗುತ್ತೇವೆ ? ಹೇಗೆ ಎದುರಿಸುತ್ತೇವೆ ಅನ್ನೋದರ ಮೇಲೆ ಅದರ ತೀವ್ರತೆ ಅರಿವಾಗುತ್ತದೆ. ಹಾಗಾಗಿ ನಮಗೇನು ತೊಂದರೆ ಆಗದಂತೆ ನಿಭಾಯಿಸುವ ಕಲೆ ನಮ್ಮಲ್ಲಿದ್ರೆ ಪ್ರತಿಯೊಂದು ಸನ್ನಿವೇಶವೂ ಕೂಡ ಸಮಸ್ಯೆ ಯಾಗದೆ ಪರಿಹಾರವಾಗುತ್ತದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ