ಸ್ಟೇಟಸ್ ಕತೆಗಳು (ಭಾಗ ೭೧) - ಕಳ್ಳ
ಪತ್ತೆದಾರಿಕೆ ಕೆಲಸ ತುಂಬಾ ಜೋರಾಗಿ ನಡೆದಿದೆ. ಸಣ್ಣ ವಿಷಯವಾದರೆ ಮರೆತು ಬಿಡಬಹುದಿತ್ತು. ತಿಂಗಳುಗಳಿಂದಲೇ ಮತ್ತೆ ಮತ್ತೆ ಸುದ್ದಿಯಾಗುತ್ತಿರುವ ವಿಚಾರವಿದು .
ಆತನ ಮುಖ ಪರಿಚಯ ಯಾರಿಗೂ ಇಲ್ಲ. ಗೊತ್ತಿರುವ ವಿಚಾರವೆಂದರೆ ,ಅಂದಾಜು ಆರು ಅಡಿ ಎತ್ತರ, ಸದೃಢ ಮೈಕಟ್ಟು, ಬೂದು ಬಣ್ಣದ ಅಂಗಿ, ನೀಲಿ ಜೀನ್ಸು, ತಲೆಗೊಂದು ಕೆಂಪು ಟೋಪಿ, ಮುಖಕ್ಕೆ ಮಾಸ್ಕ್, ಇದೆಲ್ಲಾ ಮಾಹಿತಿ ದೊರಕಿದ್ದು ಸಿಸಿಟಿವಿಯಿಂದ. ಸರ ಕಳ್ಳತನದ ಸಾಕ್ಷಿ ಹುಡುಕುತ್ತಾ ಹೊರಟಾಗ ಹಲವು ಕೇಸುಗಳಲ್ಲಿ ಕಂಡುಬಂದ ವ್ಯಕ್ತಿ ಒಬ್ಬನೇ. ಪ್ರತಿಯೊಬ್ಬ ಪೋಲೀಸರ ಹುಡುಕಾಟವು ಎಲ್ಲೋ ಒಂದು ತುದಿಯಲ್ಲಿ ತುಂಡಾಗಿ ನಿಲ್ಲುತ್ತಿದೆ .
ಎಲ್ಲೋ ಕದ್ದ ಬೈಕನ್ನು ಸವಾರಿ ಮಾಡುತ್ತಾ ಹೊರಡುತ್ತಾನೆ, ಸರ ಎಗರಿಸಿ ಇನ್ನೆಲ್ಲೋ ಇಟ್ಟು ಬಸ್ ಸೇರುತ್ತಾನೆ. ಒಮ್ಮೆ ಉಡುಪಿ, ಮತ್ತೊಮ್ಮೆ ಮಂಗಳೂರು, ಇನ್ನೊಮ್ಮೆ ಕುಂದಾಪುರ ಹೀಗೆ ಕಳ್ಳತನವಾಗುತ್ತಿರುವ ಜಾಗಗಳು ಬದಲಾಗುತ್ತಲೇ ಇರುತ್ತದೆ. ಆತನ ಕ್ರಿಯಾಶೀಲತೆಗೆ ತಕ್ಕ ಉದ್ಯೋಗ ದೊರಕದೆ ಪ್ರತಿಭಾ ಪ್ರದರ್ಶನಕ್ಕೆ ಈ ವೇದಿಕೆ ಆರಿಸಿದ್ದಾನೆ ಏಂದು ಕಾಣುತ್ತದೆ.
"ಮನೆಯಲ್ಲಿ ಅಪ್ಪನ ಮುಖ ನೋಡದೆ ತಿಂಗಳಾಯಿತು. ಕಳ್ಳನನ್ನು ಹುಡುಕುವ ಕಾರ್ಯದಲ್ಲಿ ನಿರತರಾಗಿದ್ದಾರೆ. ನಿದ್ದೆ, ಊಟ, ಯಾವುದೂ ಇಲ್ಲ. ಅಯ್ಯಾ ಕಳ್ಳ ನಿನ್ನ ದಿನದ ಊಟದ ಖರ್ಚಿಗೆ ಕಳ್ಳತನ ಮಾಡುತ್ತಿದ್ದರೆ ನಾನೇ ಅಪ್ಪನ ಬಳಿ ಹೇಳಿ ನಿನಗೊಂದು ಕೆಲಸ ಕೊಡಿಸುತ್ತೇನೆ ಒಮ್ಮೆ ಸಿಕ್ಕಿಬಿಡೋ ಮಾರಾಯ"
ಪೋಲಿಸರ ಜಾಲ ಬಿಗಿಯಾಗುತ್ತಿದೆ.
-ಧೀರಜ್ ಬೆಳ್ಳಾರೆ
ಸಾಂಕೇತಿಕ ಚಿತ್ರ: ಇಂಟರ್ನೆಟ್ ತಾಣ