ಸ್ಟೇಟಸ್ ಕತೆಗಳು (ಭಾಗ ೭೨೦) - ಕಳೆದುಕೊಂಡಿದ್ದಾನೆ

ಕೆಲವೊಂದು ಸಲ ನಮಗಿರವಿಲ್ಲದೆ ಒಂದಷ್ಟು ವಿಚಾರಗಳು ಕಳೆದು ಹೋಗುತ್ತವೆ. ಕಳೆದುಕೊಂಡದ್ದೆಲ್ಲವೂ ನಮ್ಮ ಜೊತೆಗಿದ್ದು ನಮ್ಮ ಕಣ್ಣಿಗೆ ಕಾಣುತ್ತಲೇ ಇರಬೇಕು ಅಂದೇನೂ ಇಲ್ಲ. ಕಣ್ಣಿಗೆ ಕಾಣುವಂತಾದರೆ ಹುಡುಕಿ ಹುಡುಕಿ ಆದರೂ ಪಡೆದುಕೊಳ್ಳಬಹುದು, ಆದರೆ ಕಣ್ಣಿಗೆ ಕಾಣದೆ ನಮ್ಮೊಳಗೆ ಅವಿತು ನಮ್ಮನ್ನ ಗಟ್ಟಿಯಾಗಿ ನಿಲ್ಲಿಸಿದ ವಿಚಾರಗಳು ಯೋಚನೆಗಳು ಕನಸುಗಳು ನಮ್ಮಿಂದ ಕ್ಷಣಗಳು ಉರುಳಿ ಹೋದ ಹಾಗೆ ಮಾಯವಾಗಿ ಬಿಟ್ಟರೆ ನಾವು ನಮ್ಮನ್ನೇ ಕಳೆದುಕೊಳ್ಳುವ ಪರಿಸ್ಥಿತಿಯು ನಿರ್ಮಾಣವಾಗುತ್ತದೆ. ಅವನು ಕಳೆದುಕೊಂಡು ಬಿಟ್ಟಿದ್ದಾನೆ. ಅವನದೇ ಒಂದಷ್ಟು ಕನಸುಗಳು ಬದುಕುಗಳು ಆಸೆಗಳು ಎಲ್ಲವನ್ನ ಮೂಟೆ ಕಟ್ಟಿ ಒಂದೊಂದನ್ನೇ ಕಾಲಕ್ರಮೇಣದಲ್ಲಿ ಬೆಳಕಿಗೆ ಚೆಲ್ಲುತ್ತಾ? ಬದುಕು ಆರಂಭಿಸಿದವ. ಆದರೆ ಕೆಲವೊಂದು ಪರಿಸ್ಥಿತಿಗಳಿಗೆ ಒಗ್ಗಿಕೊಂಡು ಜವಾಬ್ದಾರಿಗಳಿಗೆ ಹೆಗಲೇರಿಸಿಕೊಂಡು ತನ್ನನ್ನೇ ತಾನು ಕಳೆದುಕೊಂಡು ಬಿಟ್ಟಿದ್ದಾನೆ. ಬದುಕುತ್ತಿದ್ದಾನೆ ಉಸಿರಾಡುತ್ತಿದ್ದಾನೆ ದುಡಿಯುತ್ತಿದ್ದಾನೆ ಆದರೆ ಆತನೇನಾಗಿರಬೇಕಾಗಿತ್ತು ಅದಾಗದೆ ಎಲ್ಲವೂ ಆಗಿದ್ದಾನೆ. ಎಲ್ಲರಿಗೂ ಬೇಕಾಗಿದ್ದಾನೆ ಆದರೆ ಆತನೊಳಗಿನ ಅವನೊಬ್ಬನಿದ್ದಾನಲ್ಲ ಆತನನ್ನು ಕಳೆದುಕೊಂಡಿದ್ದಾನೆ ಅಥವಾ ಕಳೆದು ಹೋಗಿದ್ದಾನೆ. ಅವನು ಅವನನ್ನೇ ಹುಡುಕಬೇಕು ಅಥವಾ ಬೇರೆ ಯಾರಾದರೂ ಅವನನ್ನ ಹುಡುಕಿ ಗುರುತಿಸಬೇಕು....
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ