ಸ್ಟೇಟಸ್ ಕತೆಗಳು (ಭಾಗ ೭೨೨) - ಒಳ ಹೊರಗೆ

ಸ್ಟೇಟಸ್ ಕತೆಗಳು (ಭಾಗ ೭೨೨) - ಒಳ ಹೊರಗೆ

ರಸ್ತೆ ಬದಿಯ ಪುಟ್ಟದೊಂದು ಮನೆ. ಇತ್ತೀಚೆಗಷ್ಟೇ ಆ ರಸ್ತೆಯ ಹೊಸ ಕಾಂಕ್ರೀಟೀಕರಣದ ಕೆಲಸ ನಡೆಯುತ್ತಿತ್ತು. ಅಲ್ಲಲ್ಲಿ ಅಗೆದು ಹಾಕಿದ ಕಾರಣ ಧೂಳಿನ ಕಣಗಳು ಏಳುತ್ತಿದ್ದವು. ಮನೆಯೊಳಗೆ ಆ ಧೂಳಿನ ಯಾವುದೇ ಪ್ರವೇಶವಾಗಬಾರದು, ಯಾವುದೇ ರೀತಿಯ ತೊಂದರೆ ಮನೆಗೆ ಆಗಬಾರದು ಅನ್ನೋ ಕಾರಣಕ್ಕೆ ಎಲ್ಲಾ ಕಿಟಕಿಗಳಿಗೂ ಪರದೆಗಳನ್ನು ಹಾಕಲಾಗಿತ್ತು. ಮನೆಯ ಮುಂದಿನ ಅಂಗಳದ ತುದಿಯಲ್ಲಿರುವ ಕಂಪೌಂಡ್ ಗಳಿಗೆ ಎತ್ತರದ ಹಸಿರಿನ ಹೊದಿಕೆಗಳನ್ನು ನೇತು ಹಾಕಲಾಗಿತ್ತು. ಮನೆಯ ಪ್ರತಿಯೊಂದು ಕೊಠಡಿಗಳನ್ನು ಪ್ರತಿ ದಿನವೂ ನೀರಿನಿಂದ ಸ್ವಚ್ಛಗೊಳಿಸಿ ಧೂಳು ನಿಲ್ಲದ ಹಾಗೆ ಮಾಡಲಾಗಿತ್ತು. ಆಗಾಗ ಮನೆಯ ಮುಂದಿನ ಎಲ್ಲಾ ಗಿಡಗಳಿಗೆ ನೀರು ಬಿಡುತ್ತಾ ಅದರ ಎಲೆಗಳ ಮೇಲೆ ನಿಂತಿರುವ ಧೂಳುಗಳನ್ನು ತೊಳೆಯಲಾಗುತ್ತಿತ್ತು. ಎಲ್ಲವೂ ಮಾಡುತ್ತಿದ್ದುದು ಆ ಮನೆಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ. ಆದರೆ ಆ ಮನೆಯ ಯಜಮಾನ ತನ್ನ ಮನೆಯೊಳಗಿರುವ ಮಗನಿಗೆ, ಮಗಳಿಗೆ ವಿವೇಚನೆಯ ಬುದ್ಧಿಯನ್ನು ಹೇಳಿಕೊಡಲಿಲ್ಲ. ಕೈಯಲ್ಲಿ ಹಿಡಿದುಕೊಂಡ ಮೊಬೈಲ್ ನಲ್ಲಿ ಯಾವ ವಿಚಾರಗಳನ್ನು ನೋಡಬೇಕು, ಯಾವುದನ್ನು ನೋಡಬಾರದು, ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ವಿಚಾರವೇನು ಅನ್ನುವುದನ್ನ ತಿಳಿಸಲಿಲ್ಲ. ಯಾವುದಕ್ಕೆ ನಾವು ಪರದೆಗಳನ್ನು ಹಾಕಿಕೊಂಡು ನಮ್ಮೊಳಗೆ ಪ್ರವೇಶಿಸದಂತೆ ತಡೆಹಿಡಿಯಬೇಕು, ಯಾವುದನ್ನು ಮನಸ್ಪೂರ್ತಿಯಾಗಿ ಸ್ವೀಕರಿಸಬೇಕು ಅನ್ನುವ ಯಾವುದೇ ನಿರ್ಭಂಧನೆಗಳನ್ನು ಹಾಕಲಿಲ್ಲ. ಸ್ವಂತ ದುಡ್ಡಿನಿಂದ ಕಟ್ಟಿದ ಮನೆಯನ್ನು ಉಳಿಸುವ ಯೋಚನೆಯನ್ನು ಹೊಂದಿದ ಆ ಮನೆಯ ಯಜಮಾನನಿಗೆ ತನ್ನ ಸ್ವಂತ ಮಕ್ಕಳನ್ನು ಜವಾಬ್ದಾರಿಯಿಂದ ಸಮಾಜದ ಮುಂದೆ ಗಟ್ಟಿಯಾಗಿ ನಿಲ್ಲುವ ಹಾಗೆ ಮಾಡುವ ಯಾವ ಯೋಚನೆಯೂ ಬರಲಿಲ್ಲ. ಮೊದಲು ನಮ್ಮ ಮನೆಯೊಳಗಿನ ಮನಸ್ಸುಗಳು ಹೇಗಿದೆ ಅನ್ನೋದನ್ನ ಅರ್ಥ ಮಾಡಿಕೊಂಡಾಗ ಮನೆಯನ್ನು ಗಟ್ಟಿಯಾಗಿ ಉಳಿಸಿಕೊಳ್ಳಬಹುದು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ