ಸ್ಟೇಟಸ್ ಕತೆಗಳು (ಭಾಗ ೭೨೩) - ಗಣಪತಿ
ಗಣಪತಿ ಅಲ್ಲಿ ಕಾಯುತ್ತಾ ನಿಂತಿದ್ದ. ಆತ ಊರಿಗೆ ತೆರಳೋದಕ್ಕೆ ಕೆಲವೇ ದಿನಗಳು ಬಾಕಿ ಇದ್ದಾವೆ. ಆತ ಪ್ರತಿ ವರ್ಷ ಈ ದಿನಕ್ಕಾಗಿ ಈ ವಿಶೇಷ ದಿನಕ್ಕೆ ಕಾಯ್ತಾ ಇರ್ತಾನೆ. ತನ್ನನ್ನು ಊರಿನವರು ಯಾವ ರೀತಿಯಿಂದ ಸಂಭ್ರಮಿಸುತ್ತಾರೆ, ಅದೆಷ್ಟು ಜನ ಒಟ್ಟಾಗುತ್ತಾರೆ, ಪ್ರತಿಯೊಬ್ಬರೂ ಏನೇನು ಔತಣ ಕೂಟಗಳನ್ನ ತಯಾರಿಸ್ತಾರೆ, ಎಲ್ಲರೂ ಜೊತೆಯಾಗಿ ಎಷ್ಟು ಸಂಭ್ರಮದಿಂದ ಕೊಂಡಾಡುತ್ತಾರೆ ಅನ್ನೋದನ್ನ ಆತ ಕಣ್ತುಂಬಿಸಿಕೊಳ್ಳುವುದಕ್ಕೆ ಕಾಯ್ತಾ ಇರ್ತಾನೆ. ವಿಶೇಷವಾಗಿ ಆ ಒಂದು ಶಾಲೆಯಲ್ಲಿ ವಿದ್ಯಾರ್ಥಿಗಳು ಕಲಿಯುವ ಜಾಗದಲ್ಲಿ ಆತನನ್ನ ವಿದ್ಯಾರ್ಥಿಗಳೇ ಆರಾಧಿಸ್ತಾರೆ. ಅದಕ್ಕೆ ತಿಂಗಳುಗಟ್ಟಲೆ ತಯಾರಿ ನಡೆಸಿರ್ತಾರೆ. ಒಬ್ಬೊಬ್ಬರು ಒಂದೊಂದು ರೀತಿಯ ಆಲೋಚನೆಗಳನ್ನ ಹೊಂದಿ ವಿಶೇಷವಾಗಿ ಗಣೇಶನನ್ನು ಎದುರುಗೊಳ್ಳುವುದಕ್ಕೆ ರಾತ್ರಿ ಹಗಲೆನ್ನದೆ ದುಡಿಯುತ್ತಾರೆ. ಅದೊಂದು ವಾರ್ಷಿಕ ಉತ್ಸವ ಎಂಬಂತೆ ಅದರ ಬಗ್ಗೆನೇ ಹೊಸ ಹೊಸ ಆಲೋಚನೆಗಳನ್ನ ಮಾಡಿ ವಿನೋತನ ರೀತಿಯಲ್ಲಿ ಗಣೇಶನನ್ನು ಸ್ವಾಗತಿಸಿ ಮತ್ತೆ ವಿಸರ್ಜಿಸುತ್ತಾರೆ. ಪ್ರತಿಯೊಂದು ವಿದ್ಯಾರ್ಥಿಗಳದ್ದೇ ಯೋಜನೆ. ಜೊತೆಗೆ ನಿಲ್ಲಬೇಕಾದ್ದು ಎಲ್ಲರದು ಕರ್ತವ್ಯ. ಆ ಸ್ಥಳಕ್ಕೆ ಗಣೇಶ ತುಂಬಾ ಮುತುವರ್ಜಿವಹಿಸಿ ಬಂದು ಸಂಭ್ರಮವನ್ನು ಅನುಭವಿಸಿ ಎಲ್ಲರ ಖುಷಿಯನ್ನ ವೀಕ್ಷಿಸಿ ಮತ್ತೆ ತೆರಳುತ್ತಾನೆ. ಮತ್ತೆ ಮುಂದಿನ ವರ್ಷದ ಹೊಸ ವಿಶೇಷತೆಗಳನ್ನ ಏನಿರಬಹುದು ಎಂದು ಯೋಚಿಸುತ್ತಾ ಕಾಯ್ತಾ ಇರ್ತಾನೆ. ಹಾಗಾಗಿ ತಯಾರಾಗುತ್ತಿದ್ದಾನೆ ಗಣಪತಿ ಹೊರಡುವುದಕ್ಕೆ, ಇಲ್ಲಿ ಸ್ವಾಗತಿಸುವುದಕ್ಕೆ ಶಾಲೆ, ಸಂಭ್ರಮದಿಂದ ಎದುರುಗೊಳ್ಳುವುದಕ್ಕೆ ವಿದ್ಯಾರ್ಥಿಗಳು ಕಟಿಬದ್ಧರಾಗಿ ನಿಂತುಬಿಟ್ಟಿದ್ದಾರೆ. ಅದ್ಭುತವಾದ ಸಮ್ಮಿಲನವೊಂದು ಕಣ್ಣ ಮುಂದೆ ಕಾಣುವುದಕ್ಕಿದೆ. ಸದ್ಯಕ್ಕೆ ಕಾಯಬೇಕು...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ