ಸ್ಟೇಟಸ್ ಕತೆಗಳು (ಭಾಗ ೭೨೬) - ಖಾಲಿ
ಕೆಲವು ಖಾಲಿಗಳು ನೋವು ಕೊಟ್ಟರೆ ಕೆಲವು ಖಾಲಿಗಳು ಸಂಭ್ರಮವನ್ನು ಕೊಡುತ್ತವೆ .ಕಿಸೆಯಲ್ಲಿ ತುಂಬಿರುವ ಹಣ ಖಾಲಿಯಾದರೆ ಅದೇನೋ ಕಸಿವಿಸಿ, ಇನ್ನಷ್ಟು ತುಂಬಲಿ ಎನ್ನುವ ಆಶಯ. ಬುಟ್ಟಿಯಲ್ಲಿ ತುಂಬಿರುವ ಮೀನು, ತಲೆಯಲ್ಲಿ ಹೊತ್ತಿರುವ ಹಳೆ ಪ್ಲಾಸ್ಟಿಕ್ ಸಾಮಾನುಗಳೆಲ್ಲವೂ ಹೆಜ್ಜೆಗಳ ನಡೆದಷ್ಟು ಖಾಲಿಯಾಗುತ್ತಾ ಹೋದಾಗ ಮನಸ್ಸಿಗೊಂದಷ್ಟು ನಿರಾಳ. ಖಾಲಿಯೊಂದೇ, ಆದರೆ ಸನ್ನಿವೇಶಗಳು ಆಯಾಮಗಳು ಬದಲಾಗುತ್ತವೆ.
ಹಾಗೆ ತಲೆ ಮೇಲೆ ಒಂದಷ್ಟು ಬುಟ್ಟಿಗಳನ್ನು ಹೊತ್ತು ಮನೆ ಮನೆಗೆ ಸಾಗುತ್ತಿದ್ದಾರೆ. ಹಬ್ಬದ ವಾತಾವರಣವಾದ ಕಾರಣ ಎಲ್ಲರೂ ಖರೀದಿಸುವರೆಂಬ ನಿರೀಕ್ಷೆಯಲ್ಲಿ, ಆದರೆ ಹಬ್ಬದ ಸಂಭ್ರಮದಲ್ಲಿರುವವರಿಗೆ ಇದನ್ನ ಖರೀದಿಸುವ ಯಾವ ಯೋಚನೆಯೂ ಇಲ್ಲ .ಹಾಗೆಯೇ ಮತ್ತದೇ ಭಾರವನ್ನು ಹೊತ್ತು ಒಂದಷ್ಟು ನೋವಿನಿಂದ ಮನೆಯ ಕಡೆಗೆ ಹೊರಟಿದ್ದಾರೆ. ಸೂರ್ಯ ಇಳಿಯುವ ಹೊತ್ತು ಖಾಲಿ ಬುಟ್ಟಿಯನ್ನ ದಿನವೂ ಮನೆಗೆ ಒಯ್ಯುತ್ತಿದ್ದ ಮೀನು ಮಾರುವ ಸುಶೀಲಕ್ಕನಿಗೆ ಇಂದು ಬುಟ್ಟಿಯೊಳಗಿನ ಒಂದು ಮೀನು ಖಾಲಿಯಾಗದಿರುವುದೇ ಚಿಂತೆಯನ್ನುಂಟು ಮಾಡಿದೆ. ಹೀಗೆ ದಿನವೂ ಘಟಿಸಿದರೆ ಬದುಕು ಹೇಗೆ ಅನ್ನುವ ಯೋಚನೆ ಇಬ್ಬರದು. ಖಾಲಿತನಗಳು ನೋವನ್ನುಂಟು ಮಾಡುತ್ತಿದೆ. ಈ ದಿನ ಮನೆಯಲ್ಲಿ ಹಬ್ಬ ಹೇಗೆ ಅನ್ನುವ ಯೋಚನೆ ಇಬ್ಬರ ಮನಸ್ಸನ್ನು ಕಾಡುತ್ತಿದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ