ಸ್ಟೇಟಸ್ ಕತೆಗಳು (ಭಾಗ ೭೨೭) - ಮೊಳೆ

ಸ್ಟೇಟಸ್ ಕತೆಗಳು (ಭಾಗ ೭೨೭) - ಮೊಳೆ

ಕಾರ್ಯಕ್ರಮವೊಂದಕ್ಕೆ ಮೊಳೆಯನ್ನು ಗೋಡೆಗೆ ಕೊರೆಯುವ ಅವಶ್ಯಕತೆ. ಹಾಗಾಗಿ ಮೊಳೆ ಹೊಡೆಯುವುದಕ್ಕೆ ಆರಂಭ ಮಾಡಿದ್ದು. ಮೊಳೆಗೆ ಶಕ್ತಿ ಇಲ್ಲವೋ, ಗೋಡೆ ಗಟ್ಟಿಯೋ ಗೊತ್ತಿಲ್ಲ. ಮೊಳೆ ಗೋಡೆಯೊಳಗೆ ಚಲಿಸುತ್ತಾನೇ ಇಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ಮೊಳೆ ಒಳಗೆ ಚಲಿಸದೆ ಹೊರಮೈಯನ್ನು ಬಾಗಿಸುತ್ತಿದೆ. ಈಗಾಗಲೇ ಎಂಟರಿಂದ ಹತ್ತು ಮೊಳೆಗಳನ್ನು ವ್ಯರ್ಥ ಮಾಡಿ ಆಗಿದೆ. ಮತ್ತೆ ಮತ್ತೆ ಎಷ್ಟೇ ಪ್ರಯತ್ನ ಪಟ್ಟರೂ ಮೊಳೆ ಒಳಗೆ ಚಲಿಸಲೇ ಇಲ್ಲ. ಕಾರ್ಯಕ್ರಮಕ್ಕೆ ತೋರಣಗಳನ್ನು ಭಾರವಾದ ವಸ್ತುಗಳನ್ನು ಆ ಮೊಳೆಗೆ ನೇತು ಹಾಕಲೇ ಬೇಕು. ಹಲವು ಪ್ರಯತ್ನಗಳ ನಂತರ ಸ್ವಲ್ಪ ಜಾಗ ಬದಲಿಸಿ ನೋಡಿದೆ. ಆಯ್ತು. ಮೊಳೆ ನೇರವಾಗಿ ಗೋಡೆಯೊಳಗೆ ಹೋಯಿತು. ಆ ಮೊಳೆಯಿಂದ ಆಗಬಹುದಾದ ಎಲ್ಲ ಕೆಲಸಗಳು ಆಗಿ ಕಾರ್ಯಕ್ರಮವು ಸಾಂಗವಾಗಿ ನೆರವೇರಿತು. ಕೆಲವೊಂದು ಸಲ ಒಂದು ದಿಕ್ಕಿನ ಪ್ರಯತ್ನಗಳು ಸರಿಯಾದ ಫಲವನ್ನು ಕೊಡದೆ ಇದ್ದಾಗ ದಿಕ್ಕನ್ನು ಸ್ವಲ್ಪ ಬದಲಿಸಿದರೆ ಅದ್ಭುತವಾದ ಯಶಸ್ಸು ಸಿಕ್ಕೇ ಸಿಗುತ್ತದೆ. ಹಾಗಾಗಿ ದಿಕ್ಕು ಬದಲಾದರೂ ನಮ್ಮೊಳಗಿನ ಛಲ, ಪ್ರಯತ್ನಗಳು ಹಾಗೆ ಇದ್ದಾಗ ಗೆಲುವು ಖಂಡಿತಾ ಸಿಗುತ್ತದೆ. ಧನ್ಯವಾದಗಳು ಆ ಮೊಳೆಗೆ, ಜೀವನದ ದೊಡ್ದ ಪಾಠವನ್ನು ಹೇಳಿಕೊಟ್ಟದ್ದಕ್ಕೆ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ