ಸ್ಟೇಟಸ್ ಕತೆಗಳು (ಭಾಗ ೭೨೯) - ನನ್ನ ಗಣಪ
ಅದೇನು ಮುದ್ದುಮುಖ, ಪಿಳಿಪಿಳಿ ಕಣ್ಣುಗಳು, ಅಲ್ಲೇ ಕುಳಿತು ವೀಕ್ಷಿಸುತ್ತಿರಲೇಬೇಕು ಎಂದು ಬಯಸುವ ಸುಂದರವಾದ ವದನ. ಮನಸ್ಸನ್ನ ಹಾಗೆ ಸೂರೆಗೊಳಿಸುತ್ತಿದ್ದಾನೆ. ಇಷ್ಟು ಪ್ರೀತಿಯಿಂದ ಗಮನಿಸಲೇ ಇಲ್ಲ. ಕಾಲೇಜಿನ ಒಳಗೆ ಆತನ ಪ್ರತಿಷ್ಟಾಪನೆಯಾದ ಮೇಲೆ ಆತನ ಜೊತೆಗೆ ಇರುವ ಸಮಯ ಹೆಚ್ಚಾಯ್ತು. ಹಾಗೆ ಅವನನ್ನು ಹತ್ತಿರದಿಂದ ಗಮನಿಸುವಾಗ ಆ ನಿಷ್ಕಲ್ಮಶವಾದ ಭಾವ ನನ್ನ ಮನಸ್ಸಿಗೆ ತುಂಬಾ ಒಪ್ಪಿಕೊಂಡು ಬಿಟ್ಟಿತು. ಕೂಡಲೇ ಎಲ್ಲರಿಗೂ ಇಷ್ಟವಾಗುವ ಹಾಗೆ ಅವರ ಇಷ್ಟಗಳನ್ನು ಈಡೇರಿಸುತ್ತಾನೆ ಎನ್ನುವ ನಂಬಿಕೆಯನ್ನು ಸೃಷ್ಟಿಸುವ ಹಾಗೆ. ಹಾಗಾಗಿ ನಾನು ನಿರ್ಧರಿಸಿದ್ಡೇನೆ. ಇಷ್ಟರವರೆಗೆ ನಾನು ಅವನನ್ನು ಮೂರ್ತಿ ಆಗಿಯೋ ಭಾವಚಿತ್ರವಾಗಿಯೋ ದೂರದಲ್ಲೆಲ್ಲೋ ಇಟ್ಟು ನೋಡಿ ಕೈಮುಗಿದು ಭಕ್ತಿಯಿಂದ ಬೇಡುತ್ತಿದ್ದೆ. ಮಾತನಾಡುತ್ತಿದ್ದೆ. ಆದರೆ ಒಂದು ದಿನವೂ ಅವನನ್ನು ಪ್ರೀತಿಯಿಂದ ನನ್ನೊಳಗೆ ಇಳಿಸಿಕೊಂಡು ಮಾತನಾಡಿಲ್ಲ. ಆತನು ಮಾತನಾಡುತ್ತಾನೆ ಅನ್ನೋ ಮಾತನ್ನ ನಾನು ಕೇಳಿಕೊಂಡಿಲ್ಲ. ಹಾಗಾಗಿ ಆರಂಭಿಸಿದ್ದೇನೆ. ನಾನು ಅವನ ಪಕ್ಕವೇ ಕುಳಿತು ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಪ್ರೀತಿಯ ಮಾತನಾಡುತ್ತಿದ್ದೇನೆ. ಆತ ಹೇಳಿದ್ದನ್ನ ಅಷ್ಟೇ ಪ್ರೀತಿಯಿಂದ ಕೇಳುತ್ತೇನೆ. ಸತ್ಯ ಅರ್ಥವಾದದ್ದು ಇವತ್ತು. ಆ ಗಣಪನನ್ನು ನಾನು ನನ್ನೊಳಗೆ ಇಳಿಸಿಕೊಂಡಾಗ ಮನಸ್ಸು ತಿಳಿಯಾಗುತ್ತದೆ. ಹಾಗಾಗಿ ನನ್ನ ಮುದ್ದು ಮೊಗದ ನಗುವಿನ ಕೆನ್ನೆಯ, ಸುಂದರವಾದ ಪ್ರೀತಿಯ ಕಣ್ಣುಗಳ, ಡೊಳ್ಳುಹೊಟ್ಟೆಯ ಆ ಗಣಪನನ್ನು ನಾನ್ಯಾವತ್ತೂ ದೂರವಿಡುವುದಿಲ್ಲ. ನನ್ನೊಳಗೆ ಇರಿಸಿಕೊಂಡು ಜೋಪಾನವಾಗಿ ಕಾಯ್ದಿರಿಸಿಕೊಳ್ಳುತ್ತೇನೆ. ನಾಡಿದ್ದು ನೀರಿಗೆ ಹಾಕೋದು ಅವನ ಮೂರ್ತಿಯನ್ನು ಮಾತ್ರ ಅವನು ನನ್ನೊಳಗೆ ಭದ್ರನಾಗಿರುತ್ತಾನೆ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ