ಸ್ಟೇಟಸ್ ಕತೆಗಳು (ಭಾಗ ೭೨) - ಪ್ರಶ್ನೆ

ಸ್ಟೇಟಸ್ ಕತೆಗಳು (ಭಾಗ ೭೨) - ಪ್ರಶ್ನೆ

ಕನ್ನಡ ಭಾಷೆಯ ಉಳಿವಿಗೆ ಪತ್ರದ ಅಭಿಯಾನ, ಅನ್ಯಭಾಷೆಗಳ ಹೇರಿಕೆ ಬಗ್ಗೆ ರಸ್ತೆ ಮಧ್ಯ ಪ್ರತಿಭಟನೆ ಹೀಗೆ ಹೋರಾಟಗಳನ್ನು ಆಯೋಜಿಸುತ್ತಾ ಒಂದಷ್ಟು ಸನ್ಮಾನ ಬಿರುದು ಹಾರತುರಾಯಿಗಳನ್ನ ಅರ್ಪಿಸಿಕೊಂಡವರು ದಿನೇಶರು. ಆ ದಿನ ಕೆಲಸದಲ್ಲಿ ಕನ್ನಡ ಬಳಕೆಯ ಕುರಿತ ಟಿವಿ ಕಾರ್ಯಕ್ರಮ ಮುಗಿಸಿ ಮನೆಗೆ ಬಂದಿದ್ದರು. ವಾರದ ಕೊನೆ ಆದ್ದರಿಂದ ಮನೋರಂಜನೆಗೆ ಟಿವಿ ಹಚ್ಚಿ ಕನ್ನಡ ಚಾನೆಲ್ ನಲ್ಲಿ ಅನ್ಯಭಾಷೆಯ ಚಿತ್ರ ನೋಡುತ್ತಾ ಕುಳಿತಿದ್ದರು. ಅವರ ಮಗನಿಗೆ ಕಳೆದ ಕೆಲವು ತಿಂಗಳುಗಳಿಂದ ಒಂದು ಸಂಶಯ ಆ ದಿನ ಕೇಳಿಯೇ ಬಿಟ್ಟ " ಅಪ್ಪಾ ನಮ್ಮ ಕನ್ನಡ ಚಾನೆಲ್ ನ ಬೇರೆ ಭಾಷೆಯವರು ಖರೀದಿ ಮಾಡಿದ್ರಾ? ನಮ್ಮ ಸುದೀಪ್, ದರ್ಶನ್, ಯಶ್ ಇವರ ಚಲನಚಿತ್ರಗಳನ್ನ ನಮ್ಮ ಟಿವಿಯಲ್ಲಿ ನಮಗೆ ನೋಡೋಕೆ ಆಗೋದಿಲ್ವಾ? ಇಲ್ಲಿ ಕಾಣುವ ಅಲ್ಲಿರುವವರಿಗೆ ಈಗ ಕಾಣುತ್ತಿರುವ ಪಿಲ್ಮ್ ಅಲ್ಲಿ ಅವರ ತುಟಿಗಳು‌ ಕನ್ನಡ ಮಾತಾಡ್ತಿಲ್ಲ, ಮತ್ಯಾಕೆ‌ ನಾವು ನೋಡಬೇಕು, ಅಷ್ಟು ಬೇಕಿದ್ರೆ ಅವರದೇ ಭಾಷೆಯಲ್ಲಿ ನೋಡಬಹುದಲ್ವಾ? ನೀವು ಹೇಳ್ತಿದ್ರಲ್ವಾ ಟಿ. ಆರ್.ಪಿ ಅಂತ ಅದಕ್ಕೆ ನಮ್ಮ ಭಾಷೆನ ಬಲಿ ಕೊಟ್ಟು ಪಡ್ಕೋಬೇಕಾ? ಇದು ತಪ್ಪಲ್ವಾ? ಅವರ ಊರಲ್ಲಿ ಅವರ ಚಾನೆಲ್ ನಲ್ಲಿ ನಮ್ಮ ಕನ್ನಡ ಪಿಚ್ಚರ್ ಅನ್ನು ಹಾಕ್ತಾರಾ? ಪ್ರಶ್ನೆಗಳ ಪಟ್ಟಿ ದೊಡ್ಡದಿತ್ತು ದಿನೇಶರು ಚಾನಲ್ ಬದಲಾಯಿಸಿ ವಾರ್ತೆ ನೋಡುತ್ತಾ ಮಗನಿಗೆ ಗದರಿಸಿ ಓದಿಗೆ ಕಳಿಸಿದರು... 

ಪುಸ್ತಕ ಹಿಡಿದರೂ ಪ್ರಶ್ನೆಗಳು ಹುಟ್ಟುತ್ತಲೇ ಇದೆ. ನಿಮ್ಮಲ್ಲಿ ಉತ್ತರ ಇದ್ರೆ ಅವನಿಗೆ ಕೊಡಿ.

-ಧೀರಜ್ ಬೆಳ್ಳಾರೆ 

ಚಿತ್ರ ಕೃಪೆ: ಇಂಟರ್ನೆಟ್ ತಾಣ