ಸ್ಟೇಟಸ್ ಕತೆಗಳು (ಭಾಗ ೭೩೦) - ಬೇಡಿಕೆ

ಸ್ಟೇಟಸ್ ಕತೆಗಳು (ಭಾಗ ೭೩೦) - ಬೇಡಿಕೆ

ನೋವಾಗುವುದು ಸಹಜವೇನೋ ಅನಿಸ್ತಾ ಇದೆ. ಎರಡು ದಿನಗಳ ಹಿಂದೆ ನಮ್ಮ ಅಂಗಳಕ್ಕೆ ಬಂದು ನಿಂತ ಗಣಪನಿಗೆ ಇಂದು ವಿದಾಯದ ಸಮಯ. ಮುದ್ದಿನಿಂದ ನೋಡಿಕೊಂಡ ಆ ಮೊಗದ ಸುಂದರ ಚೆಲುವನ ವಿಸರ್ಜಿಸಲೇಬೇಕು. ಆತ ನಮ್ಮ ಅಂಗಳದಲ್ಲಿ ನಿಂತಿರೋದು ಎಲ್ಲ ಮನಸ್ಸುಗಳು ಒಂದಾಗಿ ಹೊಸ ಆಲೋಚನೆ ಹೊಸ ಕೆಲಸಗಳ ಕಡೆಗೆ ಮುಂದಡಿ ಇಡಲಿ ಅನ್ನುವ ಕಾರಣಕ್ಕೆ. ಆತನ ಕಾರಣ ಫಲಿಸಿದೆ ಅಂದುಕೊಳ್ಳುತ್ತೇನೆ. ಮಣ್ಣಿನಿಂದ ಉದ್ಭವವಾದ ಆತ ನೀರಿನೊಳಗೆ ಕರಗಿ ಹೋಗುತ್ತಾನೆ ಹಾಗೆ ಕರಗುತ್ತಾ ನಮ್ಮೊಳಗಿನ ಕೆಟ್ಟ ಆಲೋಚನೆಗಳು ಕರಗಬೇಕು ಅನ್ನೋದನ್ನು ತಿಳಿಸಿ ಹೊರಡುತ್ತಾನೆ. ಈ ನೆಲದ ಮಣ್ಣಿನಿಂದ ಮೂರ್ತನಾದವ ಹಾಗೆ ನಮ್ಮ ನೆಲದ ಸತ್ವದಿಂದಲೇ ನಾವು ಮೂರ್ತ ರೂಪವನ್ನು ಪಡೆದುಕೊಳ್ಳಬೇಕು ಅನ್ನೋದ್ದನ್ನ ಸಾರಿದ್ದಾನೆ. ಇರುವಷ್ಟು ದಿನ ಅದ್ಭುತವಾದ ವಿಜೃಂಭಣೆಯ ಬದುಕನ್ನ ಸಾಗಿ ಮೆರವಣಿಗೆಯ ಮೂಲಕ ಜೀವನದ ಕೊನೆಗೆ ತಲುಪಬೇಕು. ಆತ ಕಲಿಸಿದ ವಿಚಾರಗಳು ಸಾವಿರಾರು ಇಷ್ಟು ದಿನ ಮುದ್ದಿನಿಂದ ನೋಡಿಕೊಂಡ ಮೋದಕ ಪ್ರಿಯನನ್ನ ತೊರೆಯಬೇಕಲ್ಲ. ಕಣ್ಮುಂದೆ ಇದ್ದವ ಇನ್ನು ಮನಸ್ಸಿನೊಳಗೆ ಮಾತ್ರ ಇರುತ್ತಾನಲ್ಲ ಅನ್ನುವುದು ಬೇಸರದ ವಿಷಯ. ಕೈಮುಗಿದು ಬೇಡಿಕೊಳ್ಳುವುದಿಷ್ಟೆ. ಮತ್ತೆ ಮುಂದಿನ ವರ್ಷ ಇನ್ನಷ್ಟು ಸಂಭ್ರಮದಿಂದ ನಿನ್ನನ್ನು ಎದುರು ಕೊಳ್ಳುತ್ತೇನೆ. ಮನಸ್ಸಿನೊಳಗೆ ಈಗ ಸ್ಥಿರವಾಗಿರುವ ಹಾಗೆ ಇನ್ನೊಂದಷ್ಟು ವಿಶಾಲವಾಗಿ ಹರಡಿ ಗಟ್ಟಿಯಾಗಿ ನೆಲೆಗೊಳ್ಳು ಅಂತ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ