ಸ್ಟೇಟಸ್ ಕತೆಗಳು (ಭಾಗ ೭೩೨) - ಕೊನೆ

ಸ್ಟೇಟಸ್ ಕತೆಗಳು (ಭಾಗ ೭೩೨) - ಕೊನೆ

ಕೊನೆ ಅನ್ನೋದು ತುಂಬಾ ಕಾಡುತ್ತೆ. ಅಂದುಕೊಳ್ಳದೆ ನೇರವಾಗಿ ಬಂದು ಕಣ್ಣೆದುರು ನಿಂತು ಬಿಡುತ್ತದೆ. ಅವಳಿಗೆ ನಾಟಕ ಅಂದ್ರೆ ಜೀವ ಆ ನಾಟಕದಿಂದ ಆಕೆಯ ಜೀವನದ ವಿಧಾನಗಳು ಬದಲಾಗಿದೆ. ಒಂಡಷ್ಟು ಪರಿಚಯ ಹೆಚ್ಚಾಗಿದೆ, ಅವಕಾಶಗಳು ಸಿಕ್ಕಿದೆ. ಇದೆಲ್ಲ ಸಾಧ್ಯವಾಗಿರುವುದು ವೇದಿಕೆಯ ಮೇಲೆ ಬಣ್ಣ ಹಚ್ಚಿ ಅದ್ಭುತ ಅಭಿನಯ ತೋರಿದ್ದಕ್ಕೆ,. ಆಕೆಯ ಅಭಿನಯವನ್ನು ನೋಡಿ ಎಲ್ಲರೂ ಕಣ್ತುಂಬಿಕೊಳ್ಳುವವರು ಕೈ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುವವರು. ಜೀವನದ ದಾರಿಯ ಹೊಸ ಮಜಲುಗಳ ಪ್ರವೇಶದಲ್ಲಿ ಬದುಕು ಬದಲಾವಣೆಯನ್ನು ಬಯಸುತ್ತೆ. ಬಾಳ ಸಂಗಾತಿಯ ಜೊತೆಗೆ ಸಾಗಿಸಬೇಕಾದ ನಿಟ್ಟಿನಲ್ಲಿ ನಾಟಕದ ಅಭಿನಯವನ್ನು ನಿಲ್ಲಿಸಲೇಬೇಕಿತ್ತು. ಊರು ತೊರೆದು ವಿದೇಶದ ಕಡೆಗೆ ಪಯಣ ಹೊರಡುವ ಅವಳಿಗೆ ಬಣ್ಣ ಹಚ್ಚುವ ಕಾರ್ಯವನ್ನು ಆ ತಂಡದ ಜೊತೆ ಇಲ್ಲಿ ನಿಲ್ಲಿಸಬೇಕಿತ್ತು. ಆ ಕೊನೆಯ ಕ್ಷಣದ ಆ ಅದ್ಭುತ ಸನ್ನಿವೇಶಗಳನ್ನು ಮನಸ್ಸು ತುಂಬಾ ಅನುಭವಿಸಿ ಕಣ್ಣಂಚಿನಲಿ ನೀರು ತರಿಸಿಕೊಂಡು ಅಭಿನಯ ಮಾಡ್ತಾ ಇದ್ದಾಳೆ. ಇಷ್ಟು ದಿನ ಜೀವ ನೀಡಿದ ವೇದಿಕೆಗೆ ಜೊತೆಗೆ ಮುಖಕ್ಕೆ ಬಣ್ಣ ಹಚ್ಚಿ ಬೆರಗು ತುಂಬಿದ ಮುಖ ವರ್ಣಿಕೆಗಳಿಗೆ ಎಲ್ಲದಕ್ಕೂ ಪ್ರೀತಿಯಿಂದ ವಂದಿಸಿ ಹಾಗೆಯೇ ಕಣ್ಣಾಲಿಗಳನ್ನು ತುಂಬಿಕೊಂಡು ಹೆಜ್ಜೆ ದೂರ ಇಡುತ್ತಿದ್ದಾಳೆ. ವೇದಿಕೆ ಅವಳನ್ನು ಕರೆದರೂ ಬದುಕು ಹೊಸ ದಾರಿಯನ್ನು ತೋರಿಸುತ್ತಿದೆ. ಮತ್ತೆ ಒಂದು ಅವಕಾಶ ಸಿಗಲಿ ವೇದಿಕೆಯ ಮೇಲೆ ಅದ್ಭುತ ಅಭಿನಯವನ್ನು ತೋರಿಸುವ ಕೃಪೆ ಕಲಾಮಾತೆ ಕೊಡಲಿ ಎಂಬುದು ವೇದಿಕೆಯದ್ದೇ ಆಶಯ. ವೇದಿಕೆ ಕಾಯುತ್ತಿದೆ ಅವಳಿಗಾಗಿ, ಆಕೆ ಅವಕಾಶಗಳ ಬಾಗಿಲುಗಳನ್ನ ಕಾಯಬೇಕಷ್ಟೇ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ