ಸ್ಟೇಟಸ್ ಕತೆಗಳು (ಭಾಗ ೭೩೭) - ಕತೆ
ದಿನಗಳಲ್ಲಿ ಒಂದಷ್ಟು ಬದಲಾವಣೆಗಳಿರುತ್ತವೆ ಮಳೆ ಹೆಚ್ಚಾಗುತ್ತದೆ, ಚಳಿ ನಡುಗಿಸುತ್ತದೆ, ಗಾಳಿ ಬಲವಾಗಿ ಬೀಸುತ್ತದೆ, ಬಿಸಿಲು ಬಿರುಸಾಗಿರುತ್ತದೆ. ಮನೆಯಲ್ಲಿ ಒಂದಷ್ಟು ಸಮಸ್ಯೆಗಳು ಉದ್ಭವವಾಗುತ್ತವೆ. ಎಲ್ಲಿ ಏನೇ ಬದಲಾವಣೆಗಳಾದರೂ ಆತನ ಪುಟ್ಟ ಅಂಗಡಿ ಮುಂಜಾನೆ ೨ ಕ್ಕೆ ತೆರೆಯಲೇ ಬೇಕು. ಅದೇನೋ ದೊಡ್ಡ ಅಂಗಡಿಯಲ್ಲ. ಚಹಾ ಒಂದು ಬಿಸಿಯಾಗಿರುತ್ತದೆ. ಸಣ್ಣ ಪುಟ್ಟ ತಿಂಡಿಗಳು ಬಿಕರಿಯಾಗುತ್ತವೆ. ದೊಡ್ಡ ಲಾರಿಗಳು ಅಲ್ಲಿ ನಿಂತೇ ಮುಂದೆ ದಾಟುತ್ತವೆ. ಆ ಬಿಸಿಯ ಚಹಾ ದೇಹದೊಳಗೆ ಪ್ರವೇಶಿಸಿದಾಗ ಮಾತ್ರ ಮತ್ತೆ ಮುಂದೆ ಚಲಿಸುವುದಕ್ಕೆ ಇನ್ನಷ್ಟು ಉತ್ಸಾಹ ಸಿಗುತ್ತದೆ. ಅಂಗಡಿ ಆರಂಭವಾದಾಗ ಯಾರೂ ಗಿರಾಕಿಗಳಿಲ್ಲದೆ ಖಾಲಿ ಹೊಡೆಯುತ್ತಿತ್ತು. ಸುದ್ದಿಗಳು ಹರಿದಾಡಿ ಅವಶ್ಯಕತೆಗಳಿಗೇ ಅನುಗುಣವಾಗಿ ಅಂಗಡಿ ಅಲ್ಲೇ ನಿಂತಾಗ ದೊಡ್ದ ಗಾಡಿಗಳು ನಿಂತವು. ಅದುವೇ ಅಭ್ಯಾಸವಾಯಿತು. ಈಗ ಬದುಕು ಸಾಗುತ್ತಿದೆ. ಆದರೆ ಆ ಅಭ್ಯಾಸ ನಿಲ್ಲಲೇ ಬಾರದು. ಆ ಬದುಕಿನ ಈ ಕತೆಯನ್ನು ಮಗನನ್ನು ಕೂತುಕೊಳಿಸಿ ಹಾಗೇ ಹೇಳೋದ್ದಕ್ಕೂ ಕಾರಣ ಇತ್ತು. ಆತನ ನಿರಂತರ ಅಭ್ಯಾಸವನ್ನು, ಸತತ ಪರಿಶ್ರಮವನ್ನು ಯಾರದೋ ದೊಡ್ದವರ ಕತೆ ಹೇಳೋದ್ದಕ್ಕಿಂತ ತನ್ನದೇ ಕತೆ ಹೇಳಿದರೆ ಮಗ ಅರ್ಥೈಸಿಕೊಳ್ಳಬಹುದೆಂಬ ಕಾರಣಕ್ಕೆ. ಮಗ ಅರ್ಥ ಮಾಡಿಕೊಂಡ. ದೊಡ್ದವರು ತಿಳಿದವರು ಯಾರದೋ ಜೀವನದ ಕತೆಯನ್ನು ಹೇಳೋದ್ದಕ್ಕಿಂತ ತಮ್ಮದೇ ಕತೆಯನ್ನು ಮಕ್ಕಳ ಬಳಿ ಹೇಳಿದರೆ ಹೆಚ್ಚು ಅರ್ಥ ಮತ್ತು ಪ್ರಸ್ತುತವಾಗಬಹುದು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ