ಸ್ಟೇಟಸ್ ಕತೆಗಳು (ಭಾಗ ೭೪೦) - ಸೇವೆ

ಸ್ಟೇಟಸ್ ಕತೆಗಳು (ಭಾಗ ೭೪೦) - ಸೇವೆ

ಕೆಲಸಗಳು ನಮ್ಮನ್ನು ಹುಡುಕಿಕೊಂಡು ಬರುತ್ತವೆ. ಕೆಲವೊಂದು ವ್ಯಕ್ತಿಗಳಿಂದ, ಕೆಲವೊಂದು ಸಂಸ್ಥೆಗಳಿಂದ. ಭಗವಂತ ಕೆಲವೊಂದು ತೊಂದರೆಗಳನ್ನು ಕೊಟ್ಟು ನಮ್ಮಿಂದ ಹೊಸತೊಂದು ಕೆಲಸವಾಗುವಂತೆ ಪ್ರೇರೇಪಿಸುತ್ತಾನೆ. ನನಗೆ ಇದು ಅರ್ಥಾನೂ ಆಗಿರಲಿಲ್ಲ. ಕಾಲೇಜಿನ ಕೆಲಸದಲ್ಲಿ ಮುಳುಗಿದ್ದವನಿಗೆ ಹೊಟ್ಟೆಯ ಹಸಿವು ಮಧ್ಯಾಹ್ನ ಆದದ್ದನ್ನು ಸೂಚಿಸಿತು. ದೇವಾಲಯದಲ್ಲಿ ಊಟ ಇದೆ ಅನ್ನೋದು ಗೊತ್ತಾಗಿ ಅತ್ತ ಕಡೆಗೆ ಚಲಿಸಿದೆ. ಊಟ ಬೇಡ ಇನ್ನೆಲ್ಲಿಗಾದರೂ ಹೋಗೋಣ ಅಂತ ಯೋಚಿಸುವಾಗ ಯಾಕೆ ಆ ಸರತಿಯ ಸಾಲು ಹಾಗೆ ನಿಂತಿದೆ ಅನ್ನೋದು ಗೊತ್ತಾಗದೆ ಅದರ ಸಮಸ್ಯೆ ಏನು ಅಂತ ಮುಂದೆ ನೋಡಿದಾಗ ಊಟ ಬಡಿಸುವಲ್ಲಿ ಜನರ ಕೊರತೆ ಇತ್ತು. ಹೇಗೂ ಬಂದಿದ್ದೇನಲ್ಲ, ನಿಂತಿದ್ರೆ ಕೊನೆಯಲ್ಲಿ ನಿಲ್ಬೇಕು. ಸರಿ ಒಂದಷ್ಟು ಜವಾಬ್ದಾರಿಯನ್ನ ಮುತುವರ್ಜಿಯಿಂದ ವಹಿಸಿಕೊಂಡು ನನ್ನ ಇನ್ನೊಂದಷ್ಟು ಗೆಳೆಯರನ್ನು ಸೇರಿಕೊಂಡು ಆ ಊಟದ ವ್ಯವಸ್ಥೆ ಇನ್ನಷ್ಟು ಸರಾಗವಾಗಿ ಆಗುವ ಹಾಗೆ ನೋಡಿಕೊಂಡೆ. ಕಾಯುತ್ತಿದ್ದವರು ವೇಗವಾಗಿ ಊಟವನ್ನು ಮುಗಿಸಿಕೊಂಡು ಹೊರಡುವಂತಾಯಿತು ನನಗೂ ಊಟ ಚೆನ್ನಾಗಿ ಸಿಕ್ತು. ಆ ಊಟ ಹೊಟ್ಟೆಗೆ ಇಳಿಯುವಾಗ ಒಂದಷ್ಟು ನೆಮ್ಮದಿ. ಕೆಲಸ ಮಾಡಿದ್ದೇನೆ ಅನ್ನೋ ಕಾರಣಕ್ಕೆ. ಆಗ ನನಗನಿಸಿತು ದೇವರು ಕೆಲವೊಂದು ಸನ್ನಿವೇಶಗಳನ್ನು ಕಣ್ಣ ಮುಂದೆ ಸೃಷ್ಟಿಸಿ ನಮ್ಮಿಂದ ಇನ್ನೊಂದು ಯಾವುದೋ ರೀತಿಯ ಕೆಲಸವನ್ನ ಬಯಸ್ತಾ ಇರುತ್ತಾನೆ. ನಾವು ಕಣ್ಣು ಬಿಟ್ಟು ಹೃದಯದಿಂದ ಆ ಕೆಲಸವನ್ನು ಗಮನಿಸಿ ಅದರ ಕಡೆಗೆ ಹೆಜ್ಜೆ ಇಡಬೇಕಷ್ಟೇ

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ