ಸ್ಟೇಟಸ್ ಕತೆಗಳು (ಭಾಗ ೭೪೧) - ಸಾವು
ಜಗತ್ತಿನಲ್ಲಿ ಯಾವುದು ಶಾಶ್ವತವಲ್ಲ. ಎಲ್ಲವೂ ಒಂದಲ್ಲ ಒಂದು ದಿನ ತಮ್ಮ ಅವಸಾನವನ್ನು ಕಂಡುಕೊಳ್ಳಲೇಬೇಕು. ಹುಟ್ಟಿದ ಪ್ರತಿಯೊಬ್ಬರು ಸಾಯುತ್ತಾರೆ. ಪ್ರಾಣಿಗಳು, ಪಕ್ಷಿಗಳು, ಗಿಡ ಮರಗಳು ಎಲ್ಲವೂ ಕೂಡ. ಹಾಗೆಯೇ ನಾನು ಯೋಚಿಸುತ್ತಿರುವುದು ನಮ್ಮ ಜೀವನದಲ್ಲಿ ಒಂದಷ್ಟು ಖುಷಿಗಳು, ಒಂದಷ್ಟು ನೋವುಗಳು ಆಗಾಗ ಹುಟ್ಟಿ ಪ್ರತ್ಯಕ್ಷವಾಗಿ ನಮ್ಮ ಜೊತೆಗೆ ಜೀವನವನ್ನು ಸಾಗಿಸುತ್ತದೆ. ಕೆಲವೊಂದು ಅತಿಥಿಗಳ ತರ ಬಂದು ಹೋಗಿಯೇ ಬಿಡುತ್ತವೆ. ಕೆಲವೊಮ್ಮೆ ನಮ್ಮ ಜೊತೆ ತುಂಬಾ ದೂರದವರೆಗೆ ಹೆಜ್ಜೆಯನ್ನು ಹಾಕುತ್ತವೆ. ದಿನವೂ ಕಷ್ಟವನ್ನೇ ಅನುಭವಿಸುತ್ತಾ ಇದ್ದವರದ್ದು ಒಂದು ಯೋಜನೆ ಈ ಕಷ್ಟ ಅನ್ನೋದಕ್ಕೂ ಒಂದಲ್ಲ ಒಂದು ದಿನ ಸಾವು ಖಂಡಿತ ಬಂದೇ ಬರುತ್ತದೆ. ನನ್ನ ಜೊತೆಗೆ ಬದುಕುತ್ತಿರುವ ಎಲ್ಲ ಕಷ್ಟಗಳು ಒಂದು ದಿನ ತಮ್ಮ ಜೀವನದ ಅಂತಿಮ ದಿನಗಳನ್ನು ಕಣ್ಣ ಮುಂದೆ ಕಂಡುಕೊಳ್ಳುತ್ತವೆ. ನನ್ನ ಜೊತೆ ಬದುಕಿರೋದು ಸಂಭ್ರಮ ಮಾತ್ರ. ಅದಕ್ಕೆ ನಾನು ನನ್ನ ಜೊತೆಗಿರುವ ಕಷ್ಟ ಸಾಯುವವರೆಗೂ ಅದರಿಂದ ಜೀವನದ ಪಾಠಗಳನ್ನು ಕಲಿತುಕೊಂಡು ಕಷ್ಟವನ್ನು ಸ್ಮಶಾನಕ್ಕೆ ಕಳುಹಿಸಿಬಿಡುತ್ತೇವೆ. ಅನಂತರ ನೆಮ್ಮದಿಯ ಬದುಕು ನನ್ನದಾಗ್ತದೆ. ಎಲ್ಲರೂ ನೆನಪಿಟ್ಟುಕೊಳ್ಳೋಣ. ಸುಖವೋ ದುಃಖವೋ ಒಂದಲ್ಲ ಒಂದು ದಿನ ಅದು ಸತ್ತು ಮಾಯವಾಗುತ್ತದೆ. ಬದುಕಬೇಕಾದವರು ನಾವು ಮತ್ತು ನೆನಪುಗಳು...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ