ಸ್ಟೇಟಸ್ ಕತೆಗಳು (ಭಾಗ ೭೪೨) - ಒಳಹೊರಗೆ

ಸ್ಟೇಟಸ್ ಕತೆಗಳು (ಭಾಗ ೭೪೨) - ಒಳಹೊರಗೆ

ಕೋಣೆಯಲ್ಲಿ ಬಟ್ಟೆಗಳನ್ನ ತುಂಬಿಸಿಟ್ಟುಕೊಳ್ಳುವುದಕ್ಕೆ ಕಪಾಟು ಒಂದನ್ನು ತಂದಿಟ್ಟಿದ್ದೆ. ನೋಡೋದಕ್ಕೆ ತುಂಬಾ ಚೆನ್ನಾಗಿದೆ. ಅಂದವಾಗಿದೆ ಒಪ್ಪವಾಗಿದೆ. ನೀವು ಒಂದಿನ ಬಂದು ನೋಡಿದ್ರೆ ನಿಮಗೂ ಅನ್ನಿಸಬಹುದು ಈ ಕೊಠಡಿ ಎಷ್ಟು ಒಪ್ಪವಾಗಿದೆ ಎಂದು. ಆದರೆ ಎಲ್ಲಿಯಾದರು ನೀವು ಕಪಾಟಿನ ಬಾಗಿಲು ತೆರೆದಾಗ ಮಾತ್ರ ಅದರ ಒಳಗೆ ರಾಶಿ ಬಿದ್ದಿರುವ ಬಟ್ಟೆಗಳನ್ನು ನೋಡಿದರೆ ನಿಮಗೆ ನಿಜ ಸ್ಥಿತಿ ಅರಿವಾದೀತು. ಎಲ್ಲಾ ಬಟ್ಟೆಗಳನ್ನು ಅದರೊಳಗೆ ತುರುಕಿಸಲಾಗಿದೆ. ಸರಿಯಾದ ರೀತಿಯಲ್ಲಿ ಜೋಡಿಸಿಟ್ಟಿಲ್ಲ. ಒಟ್ಟಿನಲ್ಲಿ ರಾಶಿ ಹಾಕಲಾಗಿದೆ. ಇದನ್ನೆಲ್ಲಾ ನಿಮ್ಮ ಜೊತೆ ಯಾಕೆ ಹೇಳ್ತಾ ಇದ್ದೇನೆ ಅಂತ ಅಂದ್ರೆ ಮೊನ್ನೆ ತಾನೆ ಹೇಳ್ತಾ ಇದ್ದೀರಲ್ಲ ವ್ಯಕ್ತಿಯನ್ನ ಅರ್ಥ ಮಾಡಿಕೊಳ್ಳುವುದು ಹೇಗೆ ಅಂತ? ಯಾವತ್ತೂ ಯಾವ ವ್ಯಕ್ತಿಯನ್ನು ಕಣ್ಣ ಮುಂದೆ ನೋಡಿದ ಹಾಗೆಯೇ ಅರ್ಥೈಸಿಕೊಳ್ಳುವುದು ತಪ್ಪು. ಅವನ ಮನಸ್ಸನ್ನು ಒಳಗೆ ಏನಿದೆ ಅವನ ಆಲೋಚನೆಗಳು ಏನು ಅವನ ಕ್ರಿಯಾ ಪ್ರಕ್ರಿಯೆಗಳು ಏನು ಅನ್ನೋದು ತಿಳಿಯಬೇಕಾದರೆ ಆತನ ಅಂತರಂಗ ಅರಿವಾಗಬೇಕು. ಒಂದಷ್ಟು ಸಮಯ ಆತನ ಜೊತೆಗೆ ಇರಬೇಕು. ಹಾಗಾದಾಗ ಮಾತ್ರ ವ್ಯಕ್ತಿ ಮತ್ತು ವ್ಯಕ್ತಿತ್ವ ಅರ್ಥವಾಗುತ್ತದೆ. ಕಪಾಟಿನ ಒಳಗೆ ಬಟ್ಟೆಗಳನ್ನ ರಾಶಿ ರಾಶಿ ತುಂಬಿಕೊಂಡಿರುವ ಹಾಗೆ ವ್ಯಕ್ತಿಯ ಒಳಗೆ ವಿಚಾರಗಳು ತುಂಬಿಕೊಂಡಿರಬಹುದು. ಹೊರಗಿನಿಂದ ನೋಡುವುದಕ್ಕೆ ಅಂದವಿದೆ ಎಂದ ಮಾತ್ರಕ್ಕೆ ಒಳಗೂ ಅದೇ ಅಂದವಿದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ