ಸ್ಟೇಟಸ್ ಕತೆಗಳು (ಭಾಗ ೭೪೩) - ಲಾರಿ

ಸ್ಟೇಟಸ್ ಕತೆಗಳು (ಭಾಗ ೭೪೩) - ಲಾರಿ

ಅವನೊಂದಿಗೆ ಬದುಕು ನಮ್ಮದು. ಆತನನ್ನು ನಂಬಿಕೊಂಡೆ ನಮ್ಮ ಮನೆಯಲ್ಲಿ ಒಪ್ಪತ್ತಿನ ಊಟವೂ ನಡೆಯುತ್ತಿತ್ತು. ಆತನಿಗೆ ನಾನೆಷ್ಟೇ ಭಾರಗಳನ್ನು ಹೇರಿಸಿದರೂ ಕೂಡ ಆತ ಗಟ್ಟಿಯಾಗಿ ಗುರಿಯವರೆಗೂ ತಲುಪುತ್ತಾ ಇದ್ದ. ಆತನಿಗೆ ವಿಪರೀತ ನೋವಾಗುತ್ತಿತ್ತು. ನಾನು ಆತನನ್ನು ದಿನವೂ ಸುಂದರವಾಗಿ ಸ್ವಚ್ಛಗೊಳಿಸುತ್ತಿದ್ದೆ ಅಂತ ಅಲ್ಲ. ಆತ ಆ ಕಲ್ಲು ಮಣ್ಣುಗಳ ಕೊಳೆಗಳನ್ನ ಮೈಮೇಲೆ ಹೊದ್ದುಕೊಂಡಿದ್ದರೂ ಕೂಡ ಒಂದು ದಿನವೂ ನನ್ನ ಹೊಟ್ಟೆಗೆ ಕಡಿಮೆ ಮಾಡ್ಲಿಲ್ಲ. ನಾನವನ ಚಲಾಯಿಸುತ್ತಿದ್ದೆ. ಆದರೆ ನಿಜವಾಗಿ ಹೇಳಬೇಕೆಂದರೆ ಆತ ನಿಂತ್ರೆ ನನ್ನ ಜೀವನವೇ ನಿಲ್ಲುವ ಪರಿಸ್ಥಿತಿಯವರೆಗೂ ಹೋಗುತ್ತಿತ್ತು. ಹಾಗೆ ನಮ್ಮಿಬ್ಬರ ಬಾಂಧವ್ಯ. ಆದರೆ ಸರಕಾರದವರು ಕೆಲವೊಂದು ಸಲ ಯಾವುದೋ ಅದ್ಭುತವಾದ ಬದಲಾವಣೆಗೆ ಸಣ್ಣ ಪುಟ್ತ ವ್ಯಕ್ತಿಗಳನ್ನು ಗುರಿ ಮಾಡಿಕೊಂಡಿರುತ್ತಾರೆ. ನಾನು ನಂಬಿರುವ ನನ್ನ ಪ್ರೀತಿಯ ಲಾರಿ ಇದ್ದಾನಲ್ಲ ಅದರಲ್ಲಿ ಕಟ್ಟಡ ಕಟ್ಟೋದಕ್ಕೆ ಬೇಕಾದ ಕಲ್ಲುಗಳನ್ನು ತೆಗೆದುಕೊಂಡು ಹೋಗುವ ಹಾಗಿಲ್ಲ. ಅದು ತಪ್ಪಂತೆ. ಹಾಗೆ ನಿಂತು ಬಿಟ್ರೆ ನಮ್ಮ ಬದುಕು ಸಾಗುವುದಾದರೂ ಹೇಗೆ? ಆತ ಅಲ್ಲೊಂದು ದೊಡ್ದ ಮೈದಾನದಲ್ಲಿ ಅವನಂತೆ ಹಲವರು ಗೆಳೆಯರನ್ನು, ಸೇರಿಕೊಂಡು ಸಾಲಾಗಿ ನಿಂತುಬಿಟ್ಟಿದ್ದಾನೆ. ಅವನ ಮುಖವನ್ನು ನೋಡೋಕೆ ಆಗ್ತಾ ಇಲ್ಲ. ಪ್ರತಿದಿನವೂ ಒಂದಷ್ಟು ಕಲ್ಲುಗಳನ್ನು ತುಂಬಿಕೊಂಡು ರಸ್ತೆಯಲ್ಲಿ ವೇಗವಾಗಿ ಸಾಗುತ್ತಾ ಗುರಿಯನ್ನು ತಲುಪಿ ಸಿಕ್ಕ ಹಣದಲ್ಲಿ ನನ್ನ ಬದುಕನ್ನು ನೆಮ್ಮದಿಯಿಂದ ಸಾಗಿಸೋಕೆ ಸಹಾಯ ಮಾಡ್ತಾ ಇದ್ದವನು ಇಂದು ಮೌನವಾಗಿ ಬಿಟ್ಟಿದ್ದಾನೆ. ನಾನು ಆತನನ್ನು ತೊರೆದು ನನ್ನ ಮನೆಯಲ್ಲಿ ಸುಮ್ಮನೆ ಕುಳಿತಿದ್ದೇನೆ. ನಮ್ಮ ಬೇಡಿಕೆಗೆ ರಸ್ತೆ ಬದಿಯಲ್ಲಿಂದು ಸಣ್ಣ ಗೂಡು ಕಟ್ಟಿಕೊಂಡು ನ್ಯಾಯಕ್ಕಾಗಿ ಬೇಡುತ್ತಿದ್ದೇವೆ. ಹೇಳುವರಿಲ್ಲವೋ? ಕೇಳುವ ಕಿವಿಗಳು ತೂತಾಗಿದ್ದವೋ ಒಂದೂ ಅರ್ಥವಾಗುತ್ತಿಲ್ಲ. ಒಟ್ಟಿನಲ್ಲಿ ನನ್ನನ್ನು ನಾನು ನಂಬಿಕೊಂಡಿರುವ ನನ್ನ ಪ್ರೀತಿಯ ಗೆಳೆಯ ಲಾರಿಯನ್ನು ಅವರನ್ನು ಒಟ್ಟಿಗೆ ಕಳುಹಿಸಿಕೊಡಿ. ನಮ್ಮ ಬೇಡಿಕೆಯನ್ನು ಈಡೇರಿಸಿ ಕೊಡಿ ನಾವು ಬದುಕುತ್ತೇವೆ. ಎಲ್ಲದಕ್ಕೂ ಒಂದು ಪರಿಹಾರ ಇದ್ದೇ ಇದೆ. ಒಂದು ಸಲ ಕುಳಿತು ಯೋಚಿಸಿ ನಿರ್ಧರಿಸಿದರೆ ಎಲ್ಲವೂ ಒಳಿತಾಗುತ್ತದೆ. ನನಗೆ ಆ ಸಾಲಾಗಿ ನಿಂತಿರುವ ಗೆಳೆಯರನ್ನ ನೋಡಿದಾಗ ಒಂದಷ್ಟು ಬೇಸರವಾಗುತ್ತದೆ. ನಿಮಗೂ ಆದರೆ ಮನುಷ್ಯರಾಗಿರೋದಕ್ಕೆ ಸಾರ್ಥಕ ಅಂತ ಅನಿಸುತ್ತದೆ. 

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ