ಸ್ಟೇಟಸ್ ಕತೆಗಳು (ಭಾಗ ೭೪೬) - ಮಂಗಳ

ಸ್ಟೇಟಸ್ ಕತೆಗಳು (ಭಾಗ ೭೪೬) - ಮಂಗಳ

ಅಲ್ಲೊಂದು ಪುಸ್ತಕ ಓದುಗರನ್ನು ಹುಡುಕುತ್ತಿತ್ತು. ಕಾಲ ಸ್ವಲ್ಪ ಹಿಂದೆ ಸರಿದರೆ ಎಲ್ಲ ಮನೆಗಳಲ್ಲೂ ಮಂಗಳಕರವಾದ ವಿಚಾರಗಳನ್ನು  ತಿಳಿಸುತ್ತಾ ಹೊಸ ಸಾಹಿತ್ಯ ಹೊಸ ಬರವಣಿಗೆ ಹೊಸ ಲೇಖಕರೊಂದಿಗೆ ಪ್ರತಿ ಮನೆ ಮಾತಾಗಿದ್ದ ಪುಸ್ತಕ ಇಂದು ಓದುಗರನ್ನು ಹುಡುಕುತ್ತಿತ್ತು. ವಾರದಲ್ಲಿ ಮಾರುಕಟ್ಟೆಗೆ ಬಂದಾಗ ಅದರ ಕುರಿತೇ ಮಾತು ಕಥೆಗಳು ಹೆಚ್ಚಾಗಿದ್ದ ಕಾಲವದು. ಅದರಿಂದಲೇ ಜೀವನದ ಹೊಸ ರೂಪವನ್ನು ಕಂಡುಕೊಂಡವರು, ಒಂದಷ್ಟು ಚಿಂತೆ ನೋವುಗಳನ್ನು ಮರೆತವರು ಕೆಲವರು, ಹೀಗೆ ಇದ್ದಾಗ ಪುಸ್ತಕವನ್ನು ಹುಡುಕುತ್ತಿದ್ದ ಕಾಲ ದಾಟಿ ಹೋಗಿ ಎಲ್ಲರ ಕೈಗೊಂದು ಸಣ್ಣ ಗೂಡು ಬಂದು ಅದರೊಳಗೆ ವಿಚಾರಗಳು ಸಿಗುವಂತಾಗಿ ಆ ಪುಸ್ತಕದ ಕಡೆಗೆ ಕಣ್ಣೆತ್ತಿ ನೋಡುವವರಿಲ್ಲದೆ ಎಲ್ಲ ವಿಚಾರಗಳನ್ನು ತನ್ನೊಳಗೆ ತುಂಬಿಸಿಕೊಂಡು ಬಂದು ಮಾರುಕಟ್ಟೆಗೆ ನಿಂತು ಓದುಗರನ್ನು ನೋಡುತ್ತಿತ್ತು. ಯಾರೂ ಕೂಡ ಆ ಪುಸ್ತಕವನ್ನು ಕೈ ಹಿಡಿದು ಮನೆಗೊಯ್ಯುವವರಿರಲಿಲ್ಲ ಹಾಗಾಗಿ ಪುಸ್ತಕ ನೋವಿನಿಂದ ಕೊರಗೆ ಕೊರಗಿ ಮಾರುಕಟ್ಟೆಯಿಂದ ಮಾಯವಾಗಿ ಬದಿಗೆ ಸರಿದು ನಿಂತುಬಿಟ್ಟಿತು. ಕೈಯಲ್ಲಿ ಹಿಡಿದ ಸಣ್ಣ ಮೊಬೈಲೆನ್ನುವ ಮಾಯಾಜಾಲ ಬರವಣಿಗೆಯ ಪುಟ್ಟ ಪುಸ್ತಕವೊಂದನ್ನು ಮೂಲೆಗೆ ಹಾಕಿಬಿಟ್ಟಿತು. ಮಾಯಾಜಾಲದ ಸಮಸ್ಯೆಯೋ, ಅದರೊಳಗೆ ಮುಳುಗಿರುವ  ಮನಸ್ಸುಗಳ ಸಮಸ್ಯೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ಮಂಗಳಕರವಾದ ಪುಸ್ತಕವೊಂದು ಓದುಗರನ್ನು ಹುಡುಕಿ ಹುಡುಕಿ ಸೋತು ನಿರಾಶರಾಗಿ ಮೂಲೆಗೆ ಸರಿದುಬಿಟ್ಟಿತು...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ