ಸ್ಟೇಟಸ್ ಕತೆಗಳು (ಭಾಗ ೭೪೭) - ಊರು
ಒಂದು ಪುಟ್ಟ ಊರು. ಸುತ್ತ ಸಣ್ಣದೊಂದು ನದಿ ಹರಿಯುತ್ತಿದೆ. ಊರಿನಿಂದ ಇನ್ನೊಂದು ಊರಿಗೆ ಸಾಗಬೇಕಾದರೆ ದೋಣಿ ಇರಲೇ ಬೇಕು. ಅವರು ನಂಬುತ್ತಿರುವಂತೆ ಅಲ್ಲಿ ರಾತ್ರಿ 10 ಆದರೆ ಗಗ್ಗರದ ಶಬ್ದ ಕಿವಿಗೆ ಕೇಳುತ್ತದೆ. ಆ ಊರನ್ನ ಇಷ್ಟು ದಿನದವರೆಗೆ ಕಾಪಾಡಿಕೊಂಡು ಬರ್ತಾ ಇರೋದೇ ಆ ನಂಬಿಕೆ. ಅವರಿಗೆ ದೈವದ ಹೆಸರು ಗೊತ್ತಿಲ್ಲ. ಕೈ ಮುಗಿದು ಪ್ರಾರ್ಥಿಸುತ್ತಾರೆ. ವರ್ಷಕ್ಕೊಂದು ಸಲ ದೊಡ್ಡಾಲದ ಮರದ ಕೆಳಗೆ ಸೇರಿ ಈ ಊರನ್ನ ಕಾಪಾಡು ಅಂತ ಬೇಡಿಕೊಳ್ಳುತ್ತಾರೆ. ಊರಲ್ಲೇನಾದರೂ ಒಳಿತಾದರೂ ಕೆಡುಕಾದ್ರು ಆ ಮರದ ಮುಂದೆ ನಿಂತು ಕೈಮುಗಿಯುತ್ತಾರೆ. ತಾವು ಮನೆಯಲ್ಲಿ ಆಚರಿಸುವ ಸಂಭ್ರಮಗಳನ್ನ ಆ ಮರದ ಮುಂದೆ ನಿಂತು ನಿವೇದಿಸಿಕೊಳ್ಳುತ್ತಾರೆ. ನೋವುಗಳನ್ನು ಹಂಚಿಕೊಳ್ಳುತ್ತಾರೆ. ಪ್ರತಿಯೊಂದು ಆರಂಭವು ಅದೇ ಮರದ ಬುಡದಿಂದ ಆಗುತ್ತದೆ ಅನ್ನೋದು ಅವರು ಇಂದಿನವರೆಗೂ ನಂಬಿಕೊಂಡು ಬಂದಿರುವ ಸತ್ಯ. ಆ ಊರಿನಲ್ಲಿ ಯಾರೊಬ್ಬರೂ ಕೂಡ ಆ ನಂಬಿಕೆಯನ್ನು ಪ್ರಶ್ನಿಸುವುದಕ್ಕೆ ಹೋಗಲಿಲ್ಲ. ಶಿಕ್ಷಣ ಪಡೆದುಕೊಂಡಿದ್ದಾರೆ ದೊಡ್ಡ ಕೆಲಸದಲ್ಲಿ ದೊಡ್ಡ ಊರಿನಲ್ಲಿ ಇರುತ್ತಾರೆ ಆದರೆ ವರ್ಷಕ್ಕೊಂದು ಬಾರಿಯಾದರೂ ಆ ಮರದ ಬುಡಕ್ಕೆ ಬಂದು ಕೈ ಮುಗಿದು ಪ್ರಾರ್ಥಿಸಿ ಮತ್ತೆ ತಮ್ಮ ಕೆಲಸದ ಕಡೆಗೆ ಹೊರಡುತ್ತಾರೆ. ಹೊಸ ಜನರ ಪ್ರವೇಶ ಆ ಊರಿಗೆ ಅಷ್ಟಕಷ್ಟೇ. ಕಾರಣ ಕೇಳಿದರೆ ಅಲ್ಲಿ ಬದುಕು ಸಾಗಿಸುವುದು ದುಸ್ತರ ಅಂತ. ಆದರೆ ಅಲ್ಲಿದ್ದವರು ಊರು ಬಿಟ್ಟು ಹೊರಡುವ ಯಾವ ಮಾತನ್ನು ಆಡುತ್ತಾ ಇಲ್ಲ. ಸರಕಾರದಿಂದ ಸಿಗುವ ಸಣ್ಣ ಸವಲತ್ತು. ಊರು ನೆಮ್ಮದಿಯಲ್ಲಿದೆ .ಒಂದು ಪುಟ್ಟ ಶಾಲೆ, ಒಂದು ಪುಟ್ಟ ದೇವಸ್ಥಾನ, ಪುಟ್ಟ ಮಸೀದಿ, ಪುಟ್ಟ ಇಗರ್ಜಿ ಹಾಗಾಗಿ ಬದುಕು ಮರದ ಕೆಳಗೆ ನೆಮ್ಮದಿಯಾಗಿದೆ. ಇತ್ತೀಚಿಗೆ ನನಗೆ ಅದರ ವಿಳಾಸ ಕಳೆದು ಹೋಗಿದೆ. ಹಾಗಾಗಿ ಆ ಊರನ್ನ ಹುಡುಕುತ್ತಾ ಸಾಗುತ್ತಿದ್ದೇನೆ. ನಿಮಗೆಲ್ಲಾದರೂ ಕಂಡುಬಂದರೆ ಲೊಕೇಶನ್ ಕಳುಹಿಸಿಬಿಡಿ. ನಾನು ಅಲ್ಲಿಗೆ ಸಾಗಿ ಬಿಡ್ತೇನೆ…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ