ಸ್ಟೇಟಸ್ ಕತೆಗಳು (ಭಾಗ ೭೫೧) - ಚಪ್ಪಲಿ
ಹಾಗೆ ಉಳಿದುಬಿಟ್ಟಿದ್ದೇನೆ. ಮೂಲೆಗೆ ಒರಗಿ ಇಷ್ಟು ದಿನ ನಿನ್ನನ್ನ ಹೊತ್ತು ಮೆರೆಸಿದ್ದೇನೆ. ನೋವು ತಡೆದಿದ್ದೇನೆ, ಅಸಹ್ಯವಾದದ್ದನ್ನ ನನ್ನ ಮೇಲೆ ಹಚ್ಚಿಕೊಂಡು ನಿನ್ನನ್ನು ರಕ್ಷಿಸಿದ್ದೇನೆ. ತುಂಬ ದೂರದವರೆಗೆ ನೆಮ್ಮದಿಯಿಂದ ಸಾಗುವುದಕ್ಕೆ ಸಹಾಯ ಮಾಡಿದ್ದೇನೆ. ಆದರೆ ಸದ್ಯಕ್ಕೆ ನಾನೆಲ್ಲಿದ್ದೇನೆ? ನನಗೆ ನಿನ್ನ ಜೊತೆ ದಿನವೂ ಚಲಿಸಬೇಕೆಂದು ಬಯಸಿದರು ಕೂಡ ನನ್ನನ್ನ ಎಲ್ಲೋ ಒಂದು ಕಡೆ ಮೂಲೆಗೆ ಇಟ್ಟುಬಿಡುತ್ತೀಯಾ. ಎಲ್ಲೆಂದರಲ್ಲಿ ಬಿಸಾಡುತ್ತೀಯ. ನಾನು ನಿನಗೆ ಮರು ಬಳಕೆಯಾಗುವುದಕ್ಕೆ ಯೋಗ್ಯನಲ್ಲವೇ? ಗೊತ್ತಾಗುತ್ತಿಲ್ಲ. ಆದರೆ ನನಗೊಂದು ಸ್ವಲ್ಪವಾದರೂ ಗೌರವವನ್ನು ನೀಡು. ಎಲ್ಲೆಂದರಲ್ಲಿ ಬಿಡುವಾಗ ನಮ್ಮಿಬ್ಬರನ್ನು ಜೊತೆಯಾಗಿ ಅಪ್ಪಿಕೊಂಡು ಇರುವ ಹಾಗೆ ಇಟ್ಟು ಬಿಡು. ನಮ್ಮ ಮೈಯ ಕೊಳೆಯನ್ನ ಒಂದಷ್ಟು ತೆಗೆದು ಶುಭ್ರವಾಗಿರುವ ಹಾಗೆ ನೋಡಿಕೋ. ಒಟ್ಟಿನಲ್ಲಿ ಬೇಡಿಕೊಳ್ಳುವುದಿಷ್ಟೇ. ನಾನು ನಿನ್ನ ರಕ್ಷಿಸುತ್ತೇನೆ. ನನ್ನನ್ನ ರಕ್ಷಿಸಬೇಕಾದ್ದು ನಿನ್ನದೇ ಕಾಯಕ. ಒಂದಷ್ಟು ಗಮನವಿಟ್ಟು ಬಿಡು. ಎನ್ನುವ ಹಾಗೆ ನನ್ನ ಮನೆಯ ಮುಂದಿನ ಮೂಲೆ ಮೂಲೆಗೆ ಎಸೆದಿರುವ ಎರಡು ಚಪ್ಪಲಿಗಳು ನನ್ನ ನೋಡಿ ಮಾತನಾಡುವಂತೆ ಅನ್ನಿಸುತ್ತಿತ್ತು. ನಿಮ್ಮ ಮನೆಯಲ್ಲಿ ಏನಾದರೂ ಹೀಗೇ ಮಾತನಾಡುತ್ತಾ ?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ