ಸ್ಟೇಟಸ್ ಕತೆಗಳು (ಭಾಗ ೭೫೨) - ನಿರೀಕ್ಷೆ
ಮುಂಜಾನೆ 5:00 ಗಂಟೆ, ಆ ಹೋಟೆಲಲ್ಲಿ ಕೆಲಸಗಳು ಆರಂಭವಾಗಿದೆ. ವಿಧವಿಧವಾದ ತಿಂಡಿಗಳನ್ನ ತಯಾರು ಮಾಡುತ್ತಿದ್ದಾರೆ .ಅದೊಂದೇ ಹೋಟೆಲಲ್ಲ ಅದಕ್ಕೆ ಒತ್ತಿಕೊಂಡೆ ಇನ್ನೊಂದಷ್ಟು ಅಂಗಡಿಗಳು ಬಾಗಿಲು ತೆರೆದು ಬರುವವರ ನಿರೀಕ್ಷೆಗಾಗಿ ಎಲ್ಲವನ್ನು ತಯಾರಿಗೊಳಿಸುತ್ತಿದ್ದಾರೆ. ಚಪ್ಪಲಿ ಅಂಗಡಿಯವನು ಬಾಗಿಲು ತೆಗೆದು ಆ ದಿನ ಮಾರಾಟವಾಗಬೇಕಾದ ಚಪ್ಪಲಿಗಳ ಪಾದಕ್ಕಾಗಿ ಕಾಯುತ್ತಿದ್ದಾನೆ, ಬಟ್ಟೆಯ ಅಂಗಡಿಯವ ಧರಿಸುವವರು ಈ ದಿನ ಯಾರು ಸಿಗಬಹುದು ಎನ್ನುವ ಯೋಚನೆಯಲ್ಲಿದ್ದಾನೆ, ರಿಕ್ಷಾ ಸ್ಟ್ಯಾಂಡಿನಲ್ಲಿ ನಿಂತುಕೊಂಡು ಪ್ರಯಾಣಿಕರನ್ನು ಕಾಯುತ್ತಿದ್ದಾನೆ, ಆ ದಿನದ ಬದುಕಿಗೆ ಚಕ್ರ ತಿರುಗಲೇ ಬೇಕು. ಪ್ರತಿಯೊಂದು ಯಾವುದೋ ಒಂದರ ನಿರೀಕ್ಷೆಯಲ್ಲಿದೆ. ಇಷ್ಟರವರೆಗೂ ಒಬ್ಬನು ಕೂಡ ಹಸಿವಿನಿಂದ ಮನೆಗೆ ಮರಳಲಿಲ್ಲ. ಬಸ್ಸುಗಳು ತುಂಬಿ ತುಳುಕುತ್ತವೆ, ಅಂಗಡಿಗಳಲ್ಲಿ ಜನಜಂಗುಳಿ ಇರುತ್ತದೆ. ಜನ ಅಲ್ಲಿಗೆ ಚಲಿಸುತ್ತಿದ್ದಾರೆ, ಪ್ರತಿಯೊಬ್ಬರ ನಿರೀಕ್ಷೆ ಜಾರಿಯಲ್ಲಿದೆ. ನಿರೀಕ್ಷೆಯಿಲ್ಲದ ಬದುಕು, ಅದು ಬದುಕಾಗಿರುವುದಕ್ಕೆ ಸಾಧ್ಯವೇ ಇಲ್ಲ. ದಿನದ ಸಂಜೆಯ ಬಗ್ಗೆ ಆತನ ಗಲ್ಲ ಪೆಟ್ಟಿಗೆಯ ಮೇಲೆ ಎಷ್ಟು ತುಂಬುತ್ತದೆ ಅನ್ನುವುದರ ಅರಿವೇ ಇಲ್ಲದೆ ಒಬ್ಬ ನಂಬಿಕೆಯಲ್ಲಿ ಕೆಲಸ ಮಾಡ್ತಾ ಇರುವಾಗ, ನಾವು ಎಷ್ಟೋ ವರ್ಷಗಳ ನಂತರದ ಬದುಕಿನ ಕನಸಿನ ಮೇಲೆ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ತಪ್ಪು ಹೇಗೆ ಆಗುತ್ತದೆ. ಹಾಗಾಗಿ ನಿರೀಕ್ಷೆ ಜಾರಿಯಲ್ಲಿರಬೇಕು. ಒಂದು ದಿನದ ಏರು ಇನ್ನೊಂದು ದಿನದ ತಗ್ಗನ್ನು ಕಾಣಲೂ ಬಹುದು. ಏರು ತಗ್ಗುಗಳೊಂದಿಗೆ ಸಾಗುತ್ತಿದ್ದಾಗ ಮಾತ್ರ ಬದುಕು ಚಲಿಸಿದ ಅನುಭವ ಸಿಗುತ್ತದೆ. ಇಲ್ಲವಾದರೆ ನಿತಂತೆ ನಿಂತುಬಿಡುತ್ತದೆ. ಹಾಗಾಗಿ ನಾನು ನನ್ನ ನಿರೀಕ್ಷೆಯನ್ನು ಜಾರಿಯಲ್ಲಿರಿಸಿದ್ದೇನೆ. ನೀವು ನಿಮ್ಮ ನಿರೀಕ್ಷೆಯನ್ನು ಜಾರಿಯಲ್ಲಿರಿಸಿ ಒಟ್ಟಿನಲ್ಲಿ ಕ್ಷಣ ಬದಲಾಗುತ್ತದೆ ಕಾಲ ಬದಲಾಗುತ್ತದೆ ಹೀಗೆಂದು ಮಾತನಾಡುತ್ತಿದ್ದವರು. ದಿನವೂ ಸ್ಪೂರ್ತಿ ತುಂಬುತ್ತಿದ್ದವರು... ತಾವು ಕಂಡ ಕನಸುಗಳನ್ನ ನನಸು ಮಾಡಿಕೊಳ್ಳಲು ಸಾಧ್ಯವಾಗದೇ ಇರುವುದಕ್ಕೆ ಜೀವವನ್ನ ಕೈಬಿಟ್ಟರಂತೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ